ಬೆಳಗಾವಿ:ಜೀವದ ಹಂಗು ತೊರೆದು ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿದ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ ವರ್ಷಾರಂಭದಲ್ಲಿ ಕೋವಿಡ್ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಗಡಿ ಜಿಲ್ಲೆಯ ಬೆಳಗಾವಿಯಲ್ಲಿರುವ 195 ಸರ್ಕಾರಿ ಹಾಗೂ 1,521 ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು 28,195 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಜನವರಿ ಎರಡನೇ ವಾರದಲ್ಲಿ ಕೊರೊನಾ ವಾರಿಯರ್ಸ್‍ಗೆ ಲಸಿಕೆ ದೊರೆಯಲಿದೆ.
ಜಿಲ್ಲೆಯಲ್ಲಿ ಈವರೆಗೆ 26,163 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 25,611 ಜನರು ಚಿಕಿತ್ಸೆ ಪಡೆದು ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ಚಿಕಿತ್ಸೆ ಫಲಿಸದೇ 342 ಸೋಂಕಿತರು ಮೃತಪಟ್ಟಿದ್ದು, 210 ಸಕ್ರಿಯ ಕೇಸ್‍ಗಳಿವೆ. ಒಂದೂ ದಿನ ರಜೆ ಪಡೆಯದೇ ಕೊರೊನಾ ವಾರಿಯರ್ಸ್ ಸೋಂಕಿತರ ಆರೈಕೆ ಮಾಡಿದ್ದು, ಈ ಎಲ್ಲ ವಾರಿಯರ್ಸ್‍ಗೆ ಲಸಿಕೆ ನೀಡಲಾಗುತ್ತಿದೆ. ಇದಾದ ಬಳಿಕ ಉಳಿದ ವಾರಿಯರ್ಸ್‍ಗೆ ಲಸಿಕೆ ಪೂರೈಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಓದಿ...ಗ್ರಾಪಂ ಚುನಾವಣೆ ಹಿನ್ನೆಲೆ : ಕುಂದಾನಗರಿಯಲ್ಲಿ ಕಿಕ್ ಜೊತೆ ಆದಾಯ ಹೆಚ್ಚಿಸಿದ ಮದಿರೆ
ಮೂರು ಕಡೆ ಸ್ಟೋರೆಜ್
ಕೊರೊನಾ ವೈರಾಣು ರೂಪಾಂತರಗೊಳ್ಳುವ ಪೂರ್ವದಲ್ಲಿಯೇ ದೇಶದಲ್ಲಿ ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದೆ. ವರ್ಷದ ಆರಂಭದಲ್ಲಿ ರಾಜ್ಯದ ಆಯ್ದ ಜಿಲ್ಲೆಗಳಿಗೆ ಕೊರೊನಾ ಲಸಿಕೆ ಪೂರೈಕೆ ಆಗಲಿದೆ. ಗಡಿ ಜಿಲ್ಲೆ ಬೆಳಗಾವಿಯ ವೈದ್ಯಕೀಯ ಸಿಬ್ಬಂದಿಗೂ ಲಸಿಕೆ ದೊರೆಯಲಿದೆ. ಲಸಿಕೆ ಪೂರೈಕೆ ಹಿನ್ನೆಲೆಯಲ್ಲಿ ಬೆಳಗಾವಿಯ ಮೂರು ಕಡೆ ವ್ಯಾಕ್ಸಿನ್ ಸ್ಟೋರೆಜ್‍ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿರುವ ಡಿಎಚ್‍ಒ ಕಚೇರಿ ಆವರಣ, ಬಿಮ್ಸ್ ಆವರಣ ಹಾಗೂ ಬೆಳಗಾವಿಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಸ್ಟೋರೆಜ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ವ್ಯಾಕ್ಸಿನ್ ಸ್ಟೋರೆಜ್ ಮಾಡಲಾಗುತ್ತಿದೆ. ಔಷಧ ಉಗ್ರಾಣಗಳಲ್ಲೇ ಕೊರೊನಾ ವ್ಯಾಕ್ಸಿನ್ ಸ್ಟೋರೆಜ್ ಮಾಡಿಕೊಳ್ಳಲು ಕೂಡ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಎಚ್‍ಒ ಡಾ. ಶಶಿಕಾಂತ ಮುನ್ನಾಳ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬೃಹತ್ ವ್ಯಾಕ್ಸಿನ್ ಫ್ರೀಜರ್ ಮಂಜೂರು
ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆ ಎಂಬ ಕೀರ್ತಿಗೆ ಗಡಿ ಜಿಲ್ಲೆ ಬೆಳಗಾವಿ ಪಾತ್ರವಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಬೆಳಗಾವಿಗೆ ಬೃಹತ್ ವ್ಯಾಕ್ಸಿನ್ ಫ್ರೀಜರ್ ಮಂಜೂರು ಮಾಡಿದೆ. ಶೀಘ್ರವೇ ವ್ಯಾಕ್ಸಿನ್ ಫ್ರೀಜರ್ ಬೆಳಗಾವಿಗೆ ಬರಲಿದ್ದು, ಬೃಹತ್ ಪ್ರಮಾಣದಲ್ಲಿ ಲಸಿಕೆ ಸ್ಟೋರೆಜ್ ಮಾಡಲು ನೆರವಾಗಲಿದೆ. ಸಾರ್ವಜನಿಕರಿಗೆ ಲಸಿಕೆ ನೀಡುವಾಗಲೂ ವ್ಯಾಕ್ಸಿನ್ ಫ್ರೀಜರ್ ನೆರವಾಗಲಿದೆ.