ಬೆಳಗಾವಿ: ಕಳೆದ ವಾರ ಕೇಂದ್ರ ಸಚಿವ ಸುರೇಶ್ ಅಂಗಡಿ ನಿವಾಸದಲ್ಲಿ ಆಹಾರದ ಕಿಟ್‍ಗಳನ್ನು ವಿತರಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ನಂಬಿಕೊಂಡು ಸಚಿವರ ಕಚೇರಿಗೆ ನೇಕಾರ ಸಮಾಜದ ನೂರಾರು ಜನರು ಆಗಮಿಸಿದ್ದರು. ಆದ್ರೆ, ಅಂದು ಕಿಟ್ ಸಿಗದೇ ನಿರಾಸೆಗೊಂಡಿದ್ದ ಜನರಿಗೆ ಇಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರೇ ಮುಂದೆ ನಿಂತು ಆಹಾರದ ಕಿಟ್‍ಗಳನ್ನು ವಿತರಿಸಿದರು.
ನಗರದ ಕನ್ನಡ ಸಾಹಿತ್ಯ ಭವನದ ಎದುರಿಗಿರುವ ಕಾಡಾ ಕಚೇರಿಯ ಆವರಣದಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ 2 ಸಾವಿರ ದಿನಸಿ ಕಿಟ್ ಗಳನ್ನು ವಡಗಾವಿ - ಖಾಸಬಾಗ ಸೇರಿ ವಿವಿಧೆಡೆಯಿಂದ ಆಗಮಿಸಿದ ನೂರಾರು ಕಾರ್ಮಿಕರಿಗೆ ಹಂಚಿಕೆ ಮಾಡಲಾಯಿತು.
ಕೂಲಿ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸುವುದಾಗಿ ಭರವಸೆ ನೀಡಿದ್ದ ಸಚಿವರು ಇಂದು ಸರ್ಕಾರದ ವತಿಯಿಂದ 2 ಸಾವಿರ ದಿನಸಿ ಕಿಟ್‍ಗಳನ್ನು ವಿತರಣೆ ಮಾಡುವ ಮೂಲಕ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದರು. ಇನ್ನು, ಫುಡ್ ಕಿಟ್‍ಗಳು ತಲುಪಿದ್ದಕ್ಕೆ ಕಾರ್ಮಿಕರು ಕೂಡ ಹರ್ಷವ್ಯಕ್ತಪಡಿಸಿದ್ದಾರೆ.
ದಿನಸಿ ಕಿಟ್ ವಿತರಿಸಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ, ಕಳೆದ ವಾರ ನಮ್ಮ ಕಚೇರಿ ಮುಂದೆ ಫುಡ್ ಕಿಟ್ ವಿತರಿಸುತ್ತಿದ್ದಾರೆಂಬ ಸುಳ್ಳು ಸುದ್ದಿ ನಂಬಿಕೊಂಡು ಸಾಲುಗಟ್ಟಿ ನಿಂತಿದ್ದ ವಡಗಾವಿ ಖಾಸಬಾಗ ಭಾಗದ ನೂರಾರು ನೇಕಾರ ಜನರಿಗೆ ಇಂದು ಸರ್ಕಾರದ ವತಿಯಿಂದ ಕೊಡಲಾಗುತ್ತಿರುವ ಫುಡ್ ಕಿಟ್‍ಗಳನ್ನು ವಿತರಿಸಿದ್ದೇವೆ. ಇದಲ್ಲದೇ ಕೊರೊನಾ ಹೊಡೆತಕ್ಕೆ ನಲುಗಿದ ಹಿರೇಬಾಗೇವಾಡಿ ಗ್ರಾಮದಲ್ಲಿಯೂ ಇಂದು ಆಹಾರ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದರು.