ಬೆಳಗಾವಿ :ಕೆಲವೇ ಹೊತ್ತಲ್ಲಿ ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಅವರ ಆಗಮನಕ್ಕೂ ಮುನ್ನವೇ ಸಚಿವರ ದಂಡು ಹಾಗೂ ಅತೃಪ್ತ ಕೆಲ ಶಾಸಕರು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.
ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ನೂತನ ಸಚಿವ ಸಿ ಪಿ ಯೋಗೇಶ್ವರ್, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಹಾಗೂ ಸಿ ಟಿ ರವಿ ಆಗಮಿಸಿದ್ದಾರೆ.
ಅಲ್ಲದೇ ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಅನಿಲ್ ಬೆನಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಸೇರಿ ಬಿಜೆಪಿ ಮುಖಂಡರು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದಾರೆ.
ಭೋಜನದ ಬಳಿಕ ಶಾ ಭೇಟಿಗೆ ಅವಕಾಶ ನೀಡಿದ್ರೆ ಅತೃಪ್ತ ಶಾಸಕರು ಇಲ್ಲೇ ಭೇಟಿಯಾಗಿ ಅಳಲು ತೋಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸರ್ಕ್ಯೂಟ್ ಹೌಸ್‌ನಿಂದ ಹೊರ ಬಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಿ ಪಿ ಯೋಗೇಶ್ವರ್ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿತು. ಪ್ರವಾಸಿ ಮಂದಿರದಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಅಮಿತ್ ಶಾ ಮಹತ್ವದ ಮಾತುಕತೆ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ಸಾಧ್ಯತೆ ಇದೆ.