ಬೆಂಗಳೂರು:ರಾಜ್ಯದ ಹಲವೆಡೆ ಚಿರತೆ ದಾಳಿಯಿಂದ ನಾಗರೀಕರು ತತ್ತರಿಸಿದ್ದಾರೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಶಾಸಕ ಅಶ್ವಿನ್ ಕುಮಾರ್ ವಿಧಾನಸಭೆಯಲ್ಲಿ ಇಂದು ಪ್ರಸ್ತಾಪ ಮಾಡಿದ್ದಾರೆ.
ಶೂನ್ಯವೇಳೆ ವಿಷಯ ಪ್ರಸ್ತಾಪಿಸಿದ ಅವರು, ಟಿ. ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮೇಘನಾ, ಮಂಜುನಾಥ್, ನಿಂಗೇಗೌಡ ಹಾಗೂ ಸತೀಶ್ ಎಂಬುವರ ಮೇಲೆ ಚಿರತೆ ದಾಳಿ ಮಾಡಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕಬ್ಬು ಕಟಾವು ಮಾಡಲು ಆಗುತ್ತಿಲ್ಲ ಎಂದು ಹೇಳಿದರು.
ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕು: ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಅವರು, ನಮ್ಮ ಕ್ಷೇತ್ರದಲ್ಲಿ ಸಹ ಚಿರತೆ ಹಾವಳಿ ಹೆಚ್ಚಾಗಿದೆ ಎಂದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದಕ್ಕೆ ಹಾಸ್ಯ ಚಟಾಕಿ ಹಾರಿಸಿ, ಡಾಕ್ಟರ್ ನಿಮ್ಮ ಕ್ಷೇತ್ರದ ಚಿರತೆ ಬೇರೆ, ನಮ್ಮ ಕ್ಷೇತ್ರದ ಚಿರತೆ ಬೇರೆ ಅಂತ ಇದೆಯಾ ಎಂದರು. ಮಾತು ಮುಂದುವರಿಸಿದ ಅಶ್ವಿನ್ ಕುಮಾರ್, ಕುರಿ, ಕೋಳಿ, ದನಗಳ ಮೇಲೆ ದಾಳಿ ಮಾಡಿದ್ದರೆ ಸಮಸ್ಯೆ ಇರಲಿಲ್ಲ. ಆದರೆ, ಚಿರತೆಗಳು ನೇರವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನಲವತ್ತು ಬೋನ್ ಮಾಡಿಸುವಂತೆ ಮನವಿ:ಈ ಮಧ್ಯ ಮಾತನಾಡಿದ ಮಾಗಡಿ ಕ್ಷೇತ್ರದ ಶಾಸಕ ಮಂಜುನಾಥ್, ಅರಣ್ಯ ಇಲಾಖೆಯಲ್ಲಿ ಬೋನ್ ಗಳ ಕೊರತೆ ಇದೆ. ಎರಡು ಮೂರು ಬೋನ್ ಮಾತ್ರ ಇದೆ. ಚಿರತೆ ಅಂದಾಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೋನ್ ತೆಗೆದುಕೊಂಡು ಹೋಗಿ ಇಡುತ್ತಾರೆ. ಮೂವತ್ತು, ನಲವತ್ತು ಬೋನ್ ಮಾಡಿಸುವಂತೆ ಮನವಿ ಮಾಡಿದರು.