ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಿಗೆ ಜೀವ ರಕ್ಷಕ ಔಷಧ ಪೂರೈಕೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸಿ, ಶೀಘ್ರವಾಗಿ ಔಷಧ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯೆ ಹೇಮಲತಾ ನಾಯಕ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಬಗ್ಗೆ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ನಿಗದಿತ ಸಮಯಕ್ಕೆ ಔಷಧ ಸಿಗುವುದಿಲ್ಲ ಎನ್ನುವುದು ಗಂಭೀರ ವಿಷಯವಾಗಿದೆ. ಆಸ್ಪತ್ರೆಗಳಿಗೆ ಸಕಾಲಕ್ಕೆ ಔಷಧ ಪೂರೈಸಬೇಕಾಗಿರುವುದು ನಮ್ಮ ಮೂಲ ಜವಾಬ್ದಾರಿಯಾಗಿದೆ. ಆಸ್ಪತ್ರೆಗಳಿಗೆ ಶೇ.35ರಷ್ಟು ಮಾತ್ರ ಔಷಧ ಪೂರೈಕೆಯಾಗುತ್ತಿದೆ. ಟೆಂಡರ್ ಮೂಲಕ ಔಷಧ ಖರೀದಿಸುವ ಪ್ರಕ್ರಿಯೆಯಲ್ಲಿ ಸರಬರಾಜುದಾರರು ಭಾಗಿಯಾಗುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎನ್ನಲಾಗುತ್ತಿದ್ದು, ಈ ಅವ್ಯವಸ್ಥೆಯನ್ನು ಎರಡು ಮೂರು ತಿಂಗಳೊಳಗೆ ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಆಸ್ಪತ್ರೆಗಳಲ್ಲಿ ಕೆಲವೊಂದು ಪ್ರಮುಖ ಔಷಧಗಳು ಸದಾಕಾಲ ಲಭ್ಯತೆಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಕೆಲ ಪ್ರಮುಖ ಔಷಧಗಳನ್ನು ಖರೀದಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಔಷಧವು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗಬೇಕು. ಔಷಧ ಪೂರೈಕೆ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹ ಸರಬರಾಜುದಾರರು ಮುಕ್ತವಾಗಿ ಭಾಗಿಯಾಗಬೇಕು. ಸರಿಯಾದ ಸಮಯಕ್ಕೆ ಔಷಧ ಸರಬರಾಜು ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಈಗಿರುವ ಅವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.