ಬೆಳಗಾವಿ:ನಗರದ ಜ್ಯೋತಿ ಕಾಲೇಜಿನಲ್ಲಿ ವಿಧಾನಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಗಳಲ್ಲಿ ವ್ಯತ್ಯಾಸ ಕಂಡು ಅಧಿಕಾರಿಗಳು ದಂಗಾದರು. ಒಟ್ಟು ಚಲಾವಣೆಗೊಂಡ ಮತ ಹಾಗೂ ಮತಪೆಟ್ಟಿಗೆಯಲ್ಲಿರುವ ಮತಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಮತಪೆಟ್ಟಿಗೆಯಲ್ಲಿ ಹೆಚ್ಚುವರಿಯಾಗಿ ಎರಡು ಮತಗಳು ಸೇರ್ಪಡೆಯಾಗಿವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ಚಲಾವಣೆಗೊಂಡ ಮತಗಳ ಸಂಖ್ಯೆ 15,577 ಆಗಿದ್ದು, ಮತಪೆಟ್ಟಿಗೆಯಲ್ಲಿರುವ ಮತಗಳ ಸಂಖ್ಯೆ 15,579 ಆಗಿದೆ.
ಹುಬ್ಬಳ್ಳಿಯ ರೋಟರಿ ಶಾಲೆಯ ಮತಗಟ್ಟೆಯಲ್ಲಿನ ಮತಗಳಲ್ಲಿ ವ್ಯತ್ಯಾಸ ಉಂಟಾಗಿದೆ. ಮತದಾನ ದಿನದಂದು ಅಲ್ಲಿ 757 ಮತಗಳು ದಾಖಲಾಗಿತ್ತು. 25 ಮತಗಳ ಬಂಡಲ್ ಸಿದ್ದಪಡಿಸುವಾಗ 2 ಮತಗಳು ಹೆಚ್ಚಿಗೆ ಬಂದಿವೆ. ನಾಲ್ಕು ಬಾರಿ ಮತಗಳ ಲೆಕ್ಕ ಮಾಡಿದರೂ 2 ಮತಗಳು ಹೆಚ್ಚಿಗೆ ಆಗಿವೆ. ಮತಗಳ ವ್ಯತ್ಯಾಸಕ್ಕೆ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ಗಡದಿನ್ನಿ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾಧಿಕಾರಿಗಳ ವಿರುದ್ಧ ಹರಿಹಾಯ್ದರು.
ವಾಯವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ವೇಳೆಯೂ ಗೊಂದಲ ಉಂಟಾಗಿದ್ದು, ಮತಪೆಟ್ಟಿಗೆಯಲ್ಲಿ ಮೂರು ಪದವೀಧರ ಮತಗಳು ಕಂಡು ಬಂದಿವೆ. ಮತಗಳ ಕ್ರೋಢೀಕರಣದ ವೇಳೆ ಮತಗಟ್ಟೆ ಸಂಖ್ಯೆ 3ರ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಪದವೀಧರ ಮತಗಳು ಇದ್ದವು.