ಚಿಕ್ಕೋಡಿ(ಬೆಳಗಾವಿ): ದೇವರಿಗೆ ಹರಕೆ ತೀರಿಸುವುದು ಎಂದರೆ ಉರುಳು ಸೇವೆ ಮಾಡುವುದು, ಪಾದಯಾತ್ರೆ ಮಾಡುವುದು, ಉಪವಾಸ, ಬರಿಗಾಲಲ್ಲಿ ಬೆಟ್ಟ ಹತ್ತುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೋರ್ವ ಭಕ್ತ ತನ್ನ ಹರಕೆಯನ್ನು ವಿಶಿಷ್ಟವಾಗಿ ತೀರಿಸುವ ಮೂಲಕ ಗಮನ ಸೆಳೆದಿದ್ದಾನೆ. ಈ ಯುವಕ ಬರೋಬ್ಬರಿ 48 ಕಿ.ಮೀ ದೂರ ಟ್ರ್ಯಾಕ್ಟರ್ಗೆ ಟ್ರಾಲಿ ಜೋಡಿಸಿಕೊಂಡು ರಿವರ್ಸ್ ಡ್ರೈವ್ ಮಾಡಿಕೊಂಡು ಹೋಗಿ ಹರಕೆ ತೀರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿ 25 ವರ್ಷದ ಮಹೇಶ ಅಥಣಿ ಈ ಸಾಹಸ ಮಾಡಿರುವ ಭಕ್ತ. ಶಿರಹಟ್ಟಿ ಗ್ರಾಮದಿಂದ ವಿಜಯಪುರ ಜಿಲ್ಲೆಯ ಕಾಲಜ್ಞಾನಕ್ಕೆ ಹೆಸರುವಾಸಿಯಾದ ಹೊಳೆ ಬಬಲಾದಿ ಶ್ರೀ ಚಕ್ರವರ್ತಿ ಸದಾಶಿವ ಮುತ್ಯಾನ ಮಠದವರಿಗೆ ಸುಮಾರು 9 ತಾಸಿನಲ್ಲಿ ಟ್ರ್ಯಾಕ್ಟರ್ಗೆ ಟ್ರಾಲಿ ಸಮೇತ ಹಿಮ್ಮುಖವಾಗಿ 48 ಕಿ.ಮೀ ದೂರ ಚಲಾಯಿಸಿಕೊಂಡು ದೇವಸ್ಥಾನ ತಲುಪಿದ್ದಾನೆ.
ವೃತ್ತಿಯಲ್ಲಿ ಚಾಲಕ ಆಗಿದ್ದ ಮಹೇಶ ಅಥಣಿ ಹಲವು ವರ್ಷಗಳ ಹಿಂದೆ ಹರಕೆ ಹೊತ್ತುಕೊಂಡಿದ್ದ. ಈ ವರ್ಷ ಸತತವಾಗಿ ಹಿಮ್ಮುಖವಾಗಿ ಡ್ರೈವಿಂಗ್ ಮಾಡಿಕೊಂಡು ಹರಕೆ ತೀರಿಸಿದ್ದಾನೆ. ಹಿಮ್ಮುಖವಾಗಿ ಟ್ರ್ಯಾಕ್ಟರ್ ಎಂಜಿನ್ ಚಲಾಯಿಸುವುದೇ ಕಷ್ಟಕರವಾದ ಕಾರ್ಯ. ಹೀಗಿರುವಾಗ ಟ್ರಾಲಿ ಸಮೇತ ಆತ ಪ್ರಯಾಣ ಮಾಡಿದ್ದಾನೆ. ಯುವಕನ ಈ ಸಾಹಸಕ್ಕೆ ಊರಿನ ಹಾಗೂ ಬಬಲಾದಿ ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.