ಕರ್ನಾಟಕ

karnataka

ETV Bharat / state

ಅರಭಾವಿ ಅಧಿಪತ್ಯಕ್ಕಾಗಿ ಕಾದಾಟ: ಬಾಲಚಂದ್ರ ಅಖಾಡದಲ್ಲಿ ತ್ರಿಕೋನ ಸ್ಪರ್ಧೆ - ಮುಂಬರುವ ವಿಧಾನಸಭಾ ಚುನಾವಣೆ

ಬೆಳಗಾವಿ ಜಿಲ್ಲೆಯ ಅರಭಾವಿ ಮತಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಕಣದಲ್ಲಿದ್ದರೆ, ಕಾಂಗ್ರೆಸ್​ನಿಂದ ಅರವಿಂದ ದಳವಾಯಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಭೀಮಪ್ಪ ಗಡಾದ ಕಣದಲ್ಲಿದ್ದಾರೆ.

Details of Arabavi Assembly Constituency
Details of Arabavi Assembly Constituency

By

Published : May 4, 2023, 5:16 PM IST

ಬೆಳಗಾವಿ: ಜಿಲ್ಲೆಯ ಅರಭಾವಿ ಮತಕ್ಷೇತ್ರ ನಾಲ್ಕೂವರೆ ದಶಕಗಳ ಇತಿಹಾಸದಲ್ಲಿ ಕೇವಲ ಮೂರೇ ಮೂರು ಮಂದಿ ಶಾಸಕರು ಆಳಿದ ಅಪರೂಪದ ಕ್ಷೇತ್ರವಿದು. ಸದ್ಯ ಬಾಲಚಂದ್ರ ಜಾರಕಿಹೊಳಿ ವಶದಲ್ಲಿರುವ ಈ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

ಹೌದು, ಅರಭಾವಿ ಕ್ಷೇತ್ರದಿಂದ ಸತತ ಐದು ಬಾರಿ‌ ಗೆದ್ದಿರುವ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಸೋಲಿಲ್ಲದ ಸರದಾರನಾಗಿ ಹೊರ ಹೊಮ್ಮಿದ್ದು, ಆರನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ಬಾರಿ‌ ಪರಾಭವಗೊಂಡಿದ್ದ ಅರವಿಂದ ದಳವಾಯಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಭೀಮಪ್ಪ ಗಡಾದ ಕಣದಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಗಡಾದ ಅವರಿಗೆ ಸಿಕ್ಕಿದ್ದರೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರತಿರೋಧ ತೋರುವ ಸಾಧ್ಯತೆ ಇತ್ತು. ಆದರೆ, ಕಳೆದ ಭಾರಿ ಅಂತರದಿಂದ ಸೋತಿರುವ ಅರವಿಂದ ದಳವಾಯಿಗೆ ಮತ್ತೆ ಟಿಕೆಟ್ ನೀಡಿದ್ದರಿಂದ ಬಾಲಚಂದ್ರ ಜಾರಕಿಹೊಳಿ ಗೆಲುವು ಸುಲಭ ಎಂಬುದು ರಾಜಕೀಯ ಚಿಂತಕರ ವಿಶ್ಲೇಷಣೆಯಾಗಿದೆ.

ಬಾಲಚಂದ್ರ ಜಾರಕಿಹೊಳಿ

ಕ್ಷೇತ್ರದ ಹಿನ್ನೆಲೆ:1978ರಲ್ಲಿ ಈ ಕ್ಷೇತ್ರ ರಚನೆಯಾದ ದಿನದಿಂದ ಈವರೆಗೂ ಈ ಕ್ಷೇತ್ರದ ರಾಜಕೀಯ ಚರಿತ್ರೆಯಲ್ಲಿ ಎರಡು ಮುಖ್ಯ ಹೆಸರುಗಳೆಂದರೆ, ವೀರಣ್ಣ ಶಿವಲಿಂಗಪ್ಪ ಕೌಜಲಗಿ(ವಿ.ಎಸ್.ಕೌಜಲಗಿ) ಮತ್ತು ಬಾಲಚಂದ್ರ ಜಾರಕಿಹೊಳಿ. ಇಂದಿರಾ ಕಾಂಗ್ರೆಸ್ ಮೂಲಕ ರಾಜಕಾರಣ ಆರಂಭಿಸಿದ ವಿ.ಎಸ್‌. ಕೌಜಲಗಿ‌ 1978, 1983, 1989, 1994, 1999ರ ಚುನಾವಣೆಗಳಲ್ಲಿ ಗೆದ್ದಿದ್ದರು. 1985ರಲ್ಲಿ ಜನತಾ ಪಕ್ಷದ ಆರ್.ಎಂ.ಪಾಟೀಲ್ ವಿರುದ್ಧ ಒಮ್ಮೆ ವಿ.ಎಸ್.ಕೌಜಲಗಿ ಸೋಲು ಕಂಡಿದ್ದರು. ಅದಾದ ಬಳಿಕ 2004ರಲ್ಲಿ ಎಂಟ್ರಿ ಕೊಟ್ಟ ಬಾಲಚಂದ್ರ ಜಾರಕಿಹೊಳಿ, ತಮ್ಮ‌ ಮೊದಲ‌ ಚುನಾವಣೆಯಲ್ಲೆ ಕಾಂಗ್ರೆಸ್ ಹಳೆ ಹುಲಿ ವಿ.ಎಸ್. ಕೌಜಲಗಿ ಮಣಿಸಿ ಶಾಸಕರಾಗಿ ಆಯ್ಕೆಯಾದರು. 2004 ಮತ್ತು 2008ರಲ್ಲಿ ಜನತಾ ದಳದಿಂದ ಗೆದ್ದಿದ್ದ ಬಾಲಚಂದ್ರ 2008ರಲ್ಲಿ ಆಪರೇಷನ್ ಕಮಲದ ಪರಿಣಾಮ ಬಿಜೆಪಿ ಸೇರ್ಪಡೆಗೊಂಡಿದ್ದರು. ಬಳಿಕ ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ‌ ಬಿಜೆಪಿ ಶಾಸಕರಾಗಿ ಆಯ್ಕೆಯಾದರು. ನಂತರ 2013 ಮತ್ತು 2018ರಲ್ಲಿ ಗೆದ್ದ ಬಾಲಚಂದ್ರ ಜಾರಕಿಹೊಳಿ‌ ಮತ್ತೆ ಈಗ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಅರವಿಂದ ದಳವಾಯಿ

ಕ್ಷೇತ್ರದ ವಿಶೇಷತೆ:ಐತಿಹಾಸಿಕ ಅರಭಾವಿಯ ದುರದುಂಡೀಶ್ವರ ಮಠ, ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಮೂಡಲಗಿ ತಾಲೂಕು ಇರುವುದು ಇದೇ ಅರಭಾವಿ ಕ್ಷೇತ್ರದಲ್ಲಿ. ಹಳ್ಳೂರ-ಶಿವಾಪುರ, ಕಲ್ಲೋಳಿಯಲ್ಲಿ ಪುರಾತನ ಜೈನ ಬಸದಿಗಳಿವೆ. ಇನ್ನು 1978ರಿಂದ ಈವರೆಗೆ ಕೇವಲ ಮೂರು ಮಂದಿ ಮಾತ್ರ ಅರಭಾವಿ ಕ್ಷೇತ್ರ ಆಳಿದ್ದು ಇಡೀ ದೇಶದಲ್ಲೇ ಅಪರೂಪ ಎನ್ನಬಹುದು. ಸಂಪೂರ್ಣ ಕೃಷಿ ಆಧಾರಿತ ಕ್ಷೇತ್ರ ಇದಾಗಿದ್ದು, ಇಲ್ಲಿನ ರೈತರು ಅತೀ ಹೆಚ್ಚು ಕಬ್ಬು ಬೆಳೆಯುತ್ತಾರೆ. ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಇಲ್ಲಿದೆ.

ಮತದಾರ ಮಾಹಿತಿ:1,24,244-ಪುರುಷ, 1,23,404 ಮಹಿಳಾ, 8 ಇತರೆ ಮತದಾರರು ಸೇರಿ ಒಟ್ಟು ಅರಭಾವಿ ಮತಕ್ಷೇತ್ರದಲ್ಲಿ 2,47,656 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ನಿರ್ಣಾಯಕ. ಕುರುಬರು, ಉಪ್ಪಾರರು ಸೇರಿ ಇನ್ನಿತರ ಸಮುದಾಯಗಳ ಮತದಾರರಿದ್ದಾರೆ. ಇಲ್ಲಿ ಲಿಂಗಾಯತ ಮತದಾರರು ನಿರ್ಣಾಯಕರಾದ್ರೂ, ಸಾಮಾನ್ಯ ಕ್ಷೇತ್ರವಾದ್ರೂ ವಾಲ್ಮೀಕಿ ಸಮುದಾಯದ ಬಾಲಚಂದ್ರ ಜಾರಕಿಹೊಳಿ ಸತತವಾಗಿ ಗೆದ್ದು ಬರುತ್ತಿರುವುದು ಅವರ ವಯಕ್ತಿಕ ವರ್ಚಸ್ಸಿಗೆ ಸಾಕ್ಷಿ. ಅಲ್ಲದೇ ಇಲ್ಲಿ ಜಾತಿ ರಾಜಕಾರಣ ನಡೆಯೋದಿಲ್ಲ ಎಂಬ ಸಂದೇಶ ಅರಭಾವಿ ಕ್ಷೇತ್ರದ ಮತದಾರರು ರವಾನಿಸಿದ್ದಾರೆ‌.

ಅರಭಾವಿ ಕ್ಷೇತ್ರಕ್ಕೆ 4 ಬಾರಿ ಸಚಿವ ಸ್ಥಾನ:ವಿ.ಎಸ್. ಕೌಜಲಗಿ ಅವರು, 1974ರಲ್ಲಿ ದೇವರಾಜು ಅರಸು ಸರ್ಕಾರದಲ್ಲಿ ಸಣ್ಣ ನೀರಾವರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ರೇಷ್ಮೆ ಇಲಾಖೆಗಳ ಸಚಿವರಾಗಿದ್ದರು. ನಂತರ ದಿನೇಶ ಗುಂಡೂರಾವ್ ಮತ್ತು ಎಸ್.ಎಂ. ಕೃಷ್ಣಾ ಸರ್ಕಾರದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಸರ್ಕಾರದ ಅವಧಿಯಲ್ಲಿ 1993ರಿಂದ 95ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. 2001 ರಿಂದ 2004ರ ವರೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಇನ್ನು ಕಾಂಗ್ರೆಸ್ ಭದ್ರಕೋಟೆ ಬೇಧಿಸಿ ಅರಭಾವಿಯಲ್ಲಿ ಕಮಲ‌ ಅರಳಿಸಿದ್ದ ಬಾಲಚಂದ್ರ ಜಾರಕಿಹೊಳಿ 2008-2013ರ ವರೆಗೆ ಪೌರಾಡಳಿತ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)​ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ಭೀಮಪ್ಪ ಗಡಾದ

ಕಳೆದ ಎರಡು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಮತ ಗಳಿಕೆ:2013ರಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ 99,283, ಕಾಂಗ್ರೆಸ್​ನ ರಾಮಪ್ಪ ಕರೆಪ್ಪ ಉಟಗಿ 24,062, ಕೆಜೆಪಿಯ ಸುರೇಶ ಮಹಾಲಿಂಗಪ್ಪ ಲಾತೂರ 11,445 ಮತ ಗಳಿಸಿದ್ದರು. ಈ ಮೂಲಕ ಬರೊಬ್ಬರಿ 75,221 ಮತಗಳ ಭಾರಿ ಅಂತರದಿಂದ ಬಾಲಚಂದ್ರ ವಿಜಯಶಾಲಿಯಾಗಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ 96,144, ಜೆಡಿಎಸ್​ನ ಭೀಮಪ್ಪ ಗಡಾದ 48,816, ಕಾಂಗ್ರೆಸ್​​ನ ಅರವಿಂದ ದಳವಾಯಿ 23,253 ಮತ ಪಡೆದಿದ್ದು, 47,328 ಮತಗಳಿಂದ ಬಾಲಚಂದ್ರ ಜಾರಕಿಹೊಳಿ ಗೆದ್ದಿದ್ದರು.

ಈವರೆಗೆ ಗೆದ್ದ ಶಾಸಕರ ವಿವರ:
1978-ವಿ. ಎಸ್. ಕೌಜಲಗಿ-ಇಂಡಿಯನ್ ನ್ಯಾಶನಲ್ ಕಾಂಗ್ರೆಸ್(ಐ)
1983-ವಿ.ಎಸ್. ಕೌಜಲಗಿ-ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1985-ಆರ್.ಎಂ. ಪಾಟೀಲ-ಜನತಾ ಪಕ್ಷ
1989-ವಿ.ಎಸ್. ಕೌಜಲಗಿ-ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1994-ವಿ.ಎಸ್. ಕೌಜಲಗಿ-ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1999-ವಿ.ಎಸ್. ಕೌಜಲಗಿ-ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
2004-ಬಾಲಚಂದ್ರ ಜಾರಕಿಹೊಳಿ-ಜನತಾ ದಳ
2008-ಬಾಲಚಂದ್ರ ಜಾರಕಿಹೊಳಿ-ಜನತಾ ದಳ
2013-ಬಾಲಚಂದ್ರ ಜಾರಕಿಹೊಳಿ-ಬಿಜೆಪಿ
2018-ಬಾಲಚಂದ್ರ ಜಾರಕಿಹೊಳಿ-ಬಿಜೆಪಿ

ಇದನ್ನೂ ಓದಿ:ಪ್ರತಿಷ್ಠೆಯ ಕಣವಾದ ಹೊಸಕೋಟೆ ವಿಧಾನಸಭಾ ಕ್ಷೇತ್ರ: ಎಂಟಿಬಿ ನಾಗರಾಜ್ - ಶರತ್ ಬಚ್ಚೇಗೌಡ ನಡುವೆ ಜಿದ್ದಾಜಿದ್ದಿ

ABOUT THE AUTHOR

...view details