ಬೆಳಗಾವಿ:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರಗಳಿಂದ ಪರಾಭವಗೊಂಡಿದ್ದ ಲಕ್ಷ್ಮಣ ಸವದಿ ಬಿಎಸ್‍ವೈ ಸಂಪುಟದಲ್ಲಿ ಮಂತ್ರಿ ಆಗಿ ಅಚ್ಚರಿ ಮೂಡಿಸಿದ್ದರು. ಇದೀಗ ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳುವ ಮೂಲಕ ಮತ್ತೊಮ್ಮೆ ರಾಜ್ಯರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ.
ಶಾಸಕನಲ್ಲದಿದ್ದರೂ ಸವದಿ ಅವರಿಗೆ ಮಂತ್ರಿ ಸ್ಥಾನ ಕರುಣಿಸಿದ್ದ ಹೈಕಮಾಂಡ್ ನಿರ್ಣಯ ಜಿಲ್ಲೆಯ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ರಾಜ್ಯ ವಿಧಾನಸಭೆಯಲ್ಲಿ ಅತಿಹೆಚ್ಚು ಸಲ ಗೆದ್ದ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರನ್ನು ಕಡೆಗಣಿಸಿ ಸೋತ ಸವದಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಇದು ಜಿಲ್ಲಾ ಬಿಜೆಪಿ ನಾಯಕರ ಆಕ್ರೋಶಕ್ಕೆ, ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಸವದಿ ಅವರಿಗೆ ಮತ್ತೆ ಉಪಮುಖ್ಯಮಂತ್ರಿಯಂಥ ಮಹತ್ವದ ಜವಾಬ್ದಾರಿ ವಹಿಸಿದ್ದು, ಜಿಲ್ಲಾ ಕಮಲಪಾಳಯದಲ್ಲಿ ಮತ್ತಷ್ಟು ಬೆಂಕಿ ಬೀಳುವ ಸಾಧ್ಯತೆ ದಟ್ಟವಾಗಿದೆ.
2008ರಲ್ಲಿ ಪಕ್ಷೇತರ ಸಹಕಾರದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಸಹಕಾರ ಮಂತ್ರಿ ಆಗಿದ್ದರು. ಈ ಅವಧಿಯಲ್ಲೇ ವಿಧಾನಸಭೆ ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಿಸಿದ ಆರೋಪದಡಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಅದಾದ ಬಳಿಕ 2013ರ ಚುನಾವಣೆಯಲ್ಲಿ ಗೆದ್ದಿದ್ದ ಸವದಿ 2018ರ ಚುನಾವಣೆಯಲ್ಲಿ ಸೋತಿದ್ದರು. ಸೋತರೂ ಬಿಎಸ್‍ವೈ ಸಂಪುಟದಲ್ಲಿ ಮಂತ್ರಿ ಜತೆಗೆ ಡಿಸಿಎಂ ಸ್ಥಾನ ಕೊಟ್ಟಿರುವ ಹೈಕಮಾಂಡ್ ನಡೆ ಕೂಡ ಕುತೂಹಲ ಮೂಡಿಸಿದೆ.
ಕತ್ತಿ-ಜಾರಕಿಹೊಳಿ ಕುಟುಂಬ ಹಳಿಯುವ ತಂತ್ರವೇ..!
ಸಹಕಾರ ರಂಗದ ಜತೆಗೆ ಬೆಳಗಾವಿ ರಾಜಕಾರಣ ಕುಟುಂಬ ರಾಜಕಾರಣದ ಮೂಲಕವೂ ಗಮನ ಸೆಳೆಯುತ್ತಿದೆ. ಜಿಲ್ಲೆಯ ಎರಡು ಪ್ರಭಾವಿ ರಾಜಕೀಯ ಕುಟುಂಬಗಳಾದ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬದ ಪ್ರಭಾವ ಕುಗ್ಗಿಸಲು ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರಿಗೆ ಮಣೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರವನ್ನು ಸಮರ್ಥಿಸಿಕೊಳ್ಳಬಲ್ಲ, ಪಕ್ಷ ಸಂಘಟಿಸಬಲ್ಲ ಸಾಮರ್ಥ್ಯ ಹೊಂದಿರುವ ಲಕ್ಷ್ಮಣ ಸವದಿಗೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡುತ್ತಿದೆ. ಬಿಎಸ್‍ವೈ ಸಂಪುಟದಲ್ಲಿ ಒಂದು ವೇಳೆ ಉಮೇಶ ಕತ್ತಿ ಅವರಿಗೆ ಅವಕಾಶ ಸಿಕ್ಕರೂ ಮಂತ್ರಿ ಆಗಬೇಕಷ್ಟೇ. ಆ ಮೂಲಕ ಕತ್ತಿ ಅವರನ್ನು ರಾಜಕೀಯವಾಗಿ ದುರ್ಬಲ ಮಾಡುವುದು ಹಾಗೂ ಜಾರಕಿಹೊಳಿ ಕುಟುಂಬದ ಪ್ರಭಾವ ಕುಗ್ಗಿಸಲು ಬಿಜೆಪಿ ಹೈಕಮಾಂಡ್ ಸವದಿ ಅವರಿಗೆ ಡಿಸಿಎಂ ಪಟ್ಟ ಕಟ್ಟಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.