ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್​ಗೆ ಅನುಮತಿ ನಿರಾಕರಣೆ : ಪೊಲೀಸ್ ಕಮೀಷ್​ನರ್ ಖಡಕ್ ಆದೇಶ

ಎಂಇಎಸ್​ ಮಹಾಮೇಳಾವ್​ಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

ನಗರ ಪೊಲೀಸ್ ಕಮೀಷ್​ನರ್ ಎಸ್‌ ಎನ್ ಸಿದ್ದರಾಮಪ್ಪ
ನಗರ ಪೊಲೀಸ್ ಕಮೀಷ್​ನರ್ ಎಸ್‌ ಎನ್ ಸಿದ್ದರಾಮಪ್ಪ

By ETV Bharat Karnataka Team

Published : Dec 3, 2023, 3:56 PM IST

Updated : Dec 3, 2023, 4:13 PM IST

ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್​ಗೆ ಅನುಮತಿ ನಿರಾಕರಣೆ

ಬೆಳಗಾವಿ : ಮಹಾಮೇಳಾವ್ ಸಿದ್ಧತೆಯಲ್ಲಿ ತೊಡಗಿದ್ದ ಎಂಇಎಸ್‌ಗೆ ಬೆಳಗಾವಿ ಜಿಲ್ಲಾಡಳಿತ ಬಿಗ್ ಶಾಕ್ ಕೊಟ್ಟಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಹಾಮೇಳಾವ್​ಗೆ ಅನುಮತಿ ನಿರಾಕರಿಸಿ ನಗರ ಪೊಲೀಸ್ ಆಯುಕ್ತ ಎಸ್‌ ಎನ್ ಸಿದ್ದರಾಮಪ್ಪ ಖಡಕ್ ಆದೇಶ ಹೊರಡಿಸಿದ್ದಾರೆ.

ಅನುಮತಿ ನಿರಾಕರಣೆ ಮಧ್ಯೆಯೂ ಎಂಇಎಸ್ ಮಹಾಮೇಳಾವ್ ನಡೆಸುವ ಸಾಧ್ಯತೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರು, ಬೆಳಗಾವಿಯ ಮೂರು ಪ್ರಮುಖ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲೇಲೇ ಮೈದಾನ, ಕ್ಯಾಂಪ್ ಪೊಲೀಸ್ ಠಾಣೆಯ ಧರ್ಮವೀರ ಸಂಭಾಜಿ ಸರ್ಕಲ್, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಉದ್ಯಾನವನದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿ. 4ರ ಬೆಳಗ್ಗೆ 6ರಿಂದ ಡಿ.5 ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮಹಾಮೇಳಾವದಿಂದ ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆ ಭಂಗವಾಗಿ ನಗರದಾದ್ಯಂತ ಹಲವಾರು ಅಹಿತಕರ ಘಟನೆಗಳು ನಡೆದು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಹಾರಾಷ್ಟ್ರದ ಸಚಿವರು, ಶಾಸಕರು ಹಾಗೂ ಮರಾಠಾ ಮುಖಂಡರು ಆಗಮಿಸುವ ಹಿನ್ನೆಲೆಯಲ್ಲಿ ಗಡಿ ವಿಚಾರ ಕುರಿತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಇನ್ನು ರಾಜ್ಯಾದ್ಯಂತ ಹಲವಾರು ಕನ್ನಡಪರ ಸಂಘಟನೆಗಳು ಮಹಾಮೇಳಾವ್​ ಕಾರ್ಯಕ್ರಮಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಬಾರಿ ಅನುಮತಿ ನೀಡಿದರೆ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರು. ಈ ಎಲ್ಲ ಕಾರಣಗಳಿಂದಾಗಿ ಮಹಾಮೇಳಾವ್​ಗೆ ಅನುಮತಿ‌ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇನ್ನು ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವ್ ಸಿದ್ಧತೆಗೆ ಎಂಇಎಸ್ ಮುಖಂಡರು ಆಗಮಿಸಿದ್ದರು. ಎಂಇಎಸ್ ಆಗಮನ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಎಸಿಪಿಗಳಾದ ಅರುಣಕುಮಾರ ಕೋಳೂರ, ನಾರಾಯಣ ಭರಮನಿ, ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಈ ವೇಳೆ ಎಂಇಎಸ್ ಮುಖಂಡರ ಜೊತೆಗೆ ಮಾತನಾಡಿದ ಪೊಲೀಸ್ ಅಧಿಕಾರಿಗಳು ಮಹಾಮೇಳಾವ ನಡೆಸಲು ಅನುಮತಿ ಇಲ್ಲ. ಯಾವುದೇ ರೀತಿ ಸಿದ್ಧತೆ ಮಾಡದಂತೆ ಎಚ್ಚರಿಸಿದರು.

'ಮಹಾಮೇಳಾವ್'​ಗೆ ತಯಾರಿ ನಡೆಸಿದ್ದ ಎಂಇಎಸ್ :ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4, 2023 ರಿಂದ ಡಿಸೆಂಬರ್ 15 ರ ವರೆಗೆ 10 ದಿನಗಳ ಕಾಲ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಎಂಇಎಸ್ (ನವೆಂಬರ್ 23-2023) ಸಿದ್ಧತೆ ನಡೆಸಿತ್ತು. ಗಡಿ ಜಿಲ್ಲೆಯಲ್ಲಿ ಮತ್ತೆ ಭಾಷಾ ದ್ವೇಷದ ಕಿಡಿ ಹಚ್ಚಲು ಮುಂದಾಗಿತ್ತು. ಮರಾಠಾ ಮಂದಿರದಲ್ಲಿ ಸಭೆ ಸೇರಿ ಮಹಾಮೇಳಾವ್ ನಡೆಸಲು ಎಂಇಎಸ್ ತೀರ್ಮಾನ ಕೈಗೊಳ್ಳುವ ಮೂಲಕ ಗಡಿನಾಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ:ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ 'ಮಹಾಮೇಳಾವ್'​ಗೆ ಎಂಇಎಸ್ ತಯಾರಿ

Last Updated : Dec 3, 2023, 4:13 PM IST

ABOUT THE AUTHOR

...view details