ಅಥಣಿ :ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಒತ್ತಾಯಿಸಿ ತಳವಾರ ಸಮಾಜದಿಂದ ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಅಥಣಿ ಪಟ್ಟನ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಪರಿವಾರ-ತಳವಾರ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ತೀರ್ಮಾನ ಮಾಡಿದೆ. ಕರ್ನಾಟದಲ್ಲಿ ಸಣ್ಣ ಲೋಪದೋಷಗಳು ಇರುವುದರಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರಿಗೆ ಲಿಖಿತವಾಗಿ ಪತ್ರ ಬರೆದು ಚರ್ಚೆ ನಡೆಸಲಾಗಿದೆ.
ಎಸ್ಟಿ ಪ್ರಮಾಣ ಪತ್ರ ನೀಡುವ ಕುರಿತ ಮನವಿಗೆ ಡಿಸಿಎಂ ಸವದಿ ಪ್ರತಿಕ್ರಿಯೆ ಹಿಂದಿನ ಸರ್ಕಾರ ಮಾಡಿರುವ ಲೋಪದಿಂದ ಈ ತೊಂದರೆ ಉಂಟಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪರಿವಾರ, ತಳವಾರು, ಕೋಳಿ, ಅಂಬಿ, ಸನದಿ, ಇದರಲ್ಲಿ ಎಲ್ಲಾ ಪಂಗಡಗಳು ಗಂಗಾಮತ ಸಮಾಜ ಆಗಿರುವುದರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹಿಂದಿನ ಸರ್ಕಾರ ಮಾಡಿರುವ ಲೋಪವನ್ನು ಹಾಗೂ ಈಗಿನ ತೊಂದರೆ ಬಗ್ಗೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ನನಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ ಕೆಲವು ತಿದ್ದುಪಡಿ ಮಾಡಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ತಳವಾರ ಸಮುದಾಯದವರು ಯಾವುದೇ ಆತಂಕಕ್ಕೆ ಒಳಗಾಗಬೇಡಿ. ನಿಮ್ಮ ಪರವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತೀರ್ಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರ ಮಾಡಿದ ಯಾವುದೇ ತೀರ್ಮಾನವನ್ನು ಯಥಾವತ್ತಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.