ಬೆಳಗಾವಿ:ಆರೋಗ್ಯ ಇಲಾಖೆಯ ಇ-ಸಮೀಕ್ಷೆ ಕೆಲಸದಿಂದ ವಿನಾಯಿತಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಾಲ್ಕು ವರ್ಷದ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆಯದ್ದಾಗಿದ್ದು, ಅದರಲ್ಲಿ ಮಾಹಿತಿ ಸಂಗ್ರಹ ಸೇರಿ ಇತರೆ ಕೆಲಸ ಮಾಡುವುದು ಕಷ್ಟಸಾಧ್ಯ. ಕೂಡಲೇೆ ಇದರ ಬದಲಾಗಿ ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್‌ಗಳನ್ನು ವಿತರಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಗಂಡಂದಿರ ಮೊಬೈಲ್ ತೆಗೆದುಕೊಂಡು ಸಮೀಕ್ಷೆ ಮಾಡುವಂತೆ ಒತ್ತಡ- ಆರೋಪ:''ಆರೋಗ್ಯ ಇಲಾಖೆಯ ಸಮೀಕ್ಷೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸಿ ಅವರ ಮೊಬೈಲ್‌ಗಳಲ್ಲಿ ಮಾಹಿತಿ ಅಪ್‌ಲೋಡ್ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಸಮೀಕ್ಷೆ ಮಾಡದೇ ಇದ್ದಲ್ಲಿ ಗೌರವಧನ ಕಡಿತಗೊಳಿಸುವ, ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಲಾಗುತ್ತಿದೆ. ಅಲ್ಲದೇ ನಮ್ಮ ಬಳಿ ಮೊಬೈಲ್ ಇಲ್ಲದಿದ್ದರೂ ನಮ್ಮ ಗಂಡಂದಿರ ಮೊಬೈಲ್ ತೆಗೆದುಕೊಂಡು ಸಮೀಕ್ಷೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಪ್ರತಿ ತಿಂಗಳು ನಮಗೆ ಪಗಾರ ಕೊಡುವುದಿಲ್ಲ. ಎರಡ್ಮೂರು ತಿಂಗಳಿಗೊಮ್ಮೆ ಕೊಡುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಿಸುವ ನಮ್ಮಂತವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ'' ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡರು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ವಾಯ್.ಬಿ. ಶೀಗಿಹಳ್ಳಿ ಮಾತನಾಡಿ, ''ಕಳೆದ ನಾಲ್ಕು ವರ್ಷಗಳ ಹಿಂದೆ ಸರ್ಕಾರ ನಮಗೊಂದು ಮೊಬೈಲ್ ಕೊಟ್ಟಿತ್ತು. ಆ ಮೊಬೈಲ್ ಮೂಲಕ ಬಿಎಲ್‌ಒ, ಆರೋಗ್ಯ ಇಲಾಖೆ ಸೇರಿ ಇನ್ನಿತರ ಸಮೀಕ್ಷೆಗಳನ್ನು 2ಜಿ ಮೊಬೈಲ್ ಮೂಲಕ ಕೆಲಸ ಮಾಡುವಂತೆ ಹೇಳುತ್ತಿದ್ದಾರೆ. ಆ ಮೊಬೈಲ್ ಎಲ್ಲ ಬಂದ್ ಬಿದ್ದಿದ್ದು, ಮೊಬೈಲ್ ಮೂಲಕ ಕೆಲಸ ಮಾಡಲು ನಮ್ಮಿಂದ ಆಗುವುದಿಲ್ಲ. ಇಲಾಖೆ ಅಧಿಕಾರಿಗಳ ಜೊತೆಗೆ ಎರಡು ಬಾರಿ ಸಭೆ ಮಾಡಿದರೂ ನಮಗೆ ಸ್ಪಂದಿಸಿಲ್ಲ. ಇ-ಸಮೀಕ್ಷೆ ಮಾಡುವುದಿಲ್ಲ ಎಂದು ನಾವು ಹೇಳಿದರೆ ನಿಮ್ಮನ್ನು ಸಸ್ಪೆಂಡ್ ಮಾಡುತ್ತೇವೆ. ವೇತನ ಕಡಿತಗೊಳಿಸುತ್ತೇವೆಂದು ಸುಪ್ರವೈಸರ್, ಸಿಡಿಪಿಒ ಮತ್ತು ಉಪ ನಿರ್ದೇಶಕರು ನಮಗೆ ಧಮ್ಕಿ ಹಾಕುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗಮನಕ್ಕೂ ತಂದಿದ್ದೇವೆ. ಆರೋಗ್ಯ ಇಲಾಖೆ ಇ-ಸಮೀಕ್ಷೆ ಕೈಬಿಡಬೇಕು'' ಎಂದು ಒತ್ತಾಯಿಸಿದರು.