ಅಥಣಿ : ಜನರು ಈ ಸರ್ಕಾರದ ಕೆಲಸ ಮಾಡಿಸಿಕೊಳ್ಳಬೇಕು ಅಂದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಆಫೀಸ್ ಸುತ್ತೋದು, ಮನೆಗೆ ಭೇಟಿ ನೀಡಿ ಮನವರಿಕೆ ಮಾಡೋದು ಕಾಮನ್. ಆದರೆ, ಇಲ್ಲೊಂದು ಹೋರಾಟ ಸಮಿತಿ ತಮ್ಮ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ, ದೇವರಿಗೆ ಹರಕೆ ಕಟ್ಟಿದ್ದಾರೆ. ಅಂಜನಾದ್ರಿ ಪರ್ವತ ಹತ್ತಿ ಹನುಮಂತನಿಗೆ ಮೊರೆ ಇಟ್ಟಿರುವ ಈ ಸಮಿತಿ, ಶೀಘ್ರದಲ್ಲೇ ಈ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಪ್ಪ ದೇವರೆ ಅಂತಾ ಕೇಳಿಕೊಂಡಿದೆ.
ಹೀಗೆ ದೇವಸ್ಥಾನದಲ್ಲಿ ಕೆಂಪು ವಸ್ತ್ರದಲ್ಲಿ ಕಾಯಿ ಕಟ್ಟುತ್ತಿರೋ ಇವರು ಅಥಣಿ ಹೋರಾಟ ಸಮಿತಿಯ ಸದಸ್ಯರು. ಮೊನ್ನೆಯಷ್ಟೇ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿದ್ದ ಈ ತಂಡ, ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಅಂಜನಾದ್ರಿಯ ಹನುಂತನಿಗೆ ಮೊರೆ ಇಟ್ಟು ಬಂದಿದೆ.
ಈಗಾಗಲೇ ಗೋಕಾಕ್ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಜೊತೆಗೆ ಈಗ ಹೊಸದಾಗಿ ಅಥಣಿಯನ್ನೂ ಸಹ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಥಣಿಯ ಕೊನೆ ಭಾಗದದಿಂದ ಬೆಳಗಾವಿಗೆ ಹೋಗಿ ಬರೋಕೆ ಬರೊಬ್ಬರಿ 320 ಕಿ.ಮೀ ದೂರವಾಗುತ್ತೆ. ಹೀಗಾಗಿ, ಇಷ್ಟು ದೊಡ್ಡ ಜಿಲ್ಲೆಯಾಗಿ ಬೆಳಗಾವಿ ಬೆಳೆದಿದೆ. ವಿಸ್ತೀರ್ಣದ ಆಧಾರ ಮೇಲೆ ಜಿಲ್ಲೆಯನ್ನ ವಿಭಜನೆ ಮಾಡಿ ಅಥಣಿಯನ್ನ ಹೊಸ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.