ಬೆಳಗಾವಿ:ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 19ರ ವರೆಗೆ ಗಡುವು ನೀಡಿದ್ದೇವೆ. ಮೀಸಲಾತಿ ಕೊಟ್ಟರೆ ವಿಜಯೋತ್ಸವ, ಇಲ್ಲದಿದ್ದರೆ ಡಿಸೆಂಬರ್ 22ರಂದು ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ2ಎ ಮೀಸಲಾತಿಗೆ ಆಗ್ರಹಿಸಿ ಎರಡು ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿದ್ದೇವೆ. ಡಿಸೆಂಬರ್ 19 ರಂದು ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ. ಮುಖ್ಯಮಂತ್ರಿಗಳ ನಿಲುವು ನೋಡಿಕೊಂಡು ಹೋರಾಟ ಕೈಗೊಳ್ತೀವಿ. ಇದೇ ಡಿಸೆಂಬರ್ 22 ರಂದು ಸುವರ್ಣಸೌಧದ ಎದುರು ವಿರಾಟ್ ಪಂಚಶಕ್ತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಪಂಚಮಸಾಲಿ ಸಮಾವೇಶ:ನಾಳೆ ಸವದತ್ತಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತ ಮೀಸಲಾತಿ ಬೃಹತ್ ಸಮಾವೇಶ ಆಯೋಜಿಸಿದ್ದೇವೆ. ರಾಜ್ಯ ಸರ್ಕಾರ ಮೀಸಲಾತಿ ಕೊಟ್ಟರೆ ಯಾವ ರೀತಿ ವಿಜಯೋತ್ಸವ ಮಾಡಬೇಕು. ಮೀಸಲಾತಿ ಕೊಡದಿದ್ದರೆ ಯಾವ ರೀತಿ ಉಗ್ರ ಹೋರಾಟ ಮಾಡಬೇಕು ಎಂಬ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಿವೆ ಎಂದು ತಿಳಿಸಿದರು.