ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ:ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು 47 ದಿನಗಳಾದರೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಬಿಜೆಪಿಯವರಿಗೆ ಆಗಿಲ್ಲ ಎಂದರೆ, ಇದಕ್ಕಿಂತ ರಾಜಕೀಯ ನಾಯಕತ್ವದ ವೈಫಲ್ಯ ಇನ್ಯಾವುದಾದರೂ ಕರ್ನಾಟಕದಲ್ಲಿ ಇದೆಯೇ? ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಟೀಕಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಕಂದಾಯ ಇಲಾಖೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಬೀದಿಗಿಳಿದು, ಒಬ್ಬರಿಗೊಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಆಡುತ್ತಿರುವ ಮಾತುಗಳನ್ನು ನೋಡಿದರೆ ಅವರಿಗೆ ಏನಾದರೂ ಜವಾಬ್ದಾರಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಜನರ ಬಗ್ಗೆ ಏನಾದರೂ ಇವರಿಗೆ ಕಾಳಜಿ ಇದೆಯೇ? ಅಧಿಕಾರ ಕಳೆದುಕೊಂಡ ಮೇಲೆ ಇವತ್ತಿನವರೆಗೂ ಅವರಿಗೆ ಜನರ ಬಗ್ಗೆ ಕಾಳಜಿ ಬಂದಿಲ್ಲ ಎಂದು ದೂರಿದರು.
ಅಧಿಕಾರದ ಕಚ್ಚಾಟ ಮತ್ತು ಚುನಾವಣೆ ಬಗ್ಗೆ ಮಾತಾಡುತ್ತಿರುವುದು ಬಿಟ್ಟರೆ ಜನ ಕಲ್ಯಾಣದ ಬಗ್ಗೆ ಗಮನ ಕೊಡಲಿಲ್ಲ. ಇವರ ರಾಜಕೀಯ ಕಚ್ಚಾಟ ಎಲ್ಲರಿಗೂ ಬೇಸರ ತರಿಸುತ್ತಿದೆ. ಅದರ ನಡುವೆ ರಾಜ್ಯದಲ್ಲಿ ನಾವು ಸುಭದ್ರ ಸರ್ಕಾರ ಕೊಡುತ್ತಿದ್ದೇವೆ. ಜನರ ಕಲ್ಯಾಣಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ. ಕೊಟ್ಟ ಮಾತು ಉಳಿಸಿಕೊಳ್ಳಲು ಒಂದೊಂದು ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.
ಎಲ್ಲರ ಶ್ರಮದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ:ಶ್ರಮ ಯಾರೋ ಪಡ್ತಾರೆ, ಅಧಿಕಾರ ಇನ್ಯಾರೋ ಅನುಭವಿಸುತ್ತಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಶ್ರಮಪಟ್ಟಿದ್ದೇವೆ. ಎಲ್ಲರ ಶ್ರಮದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ಮೇಲೆ ಜನರು ಇಟ್ಟಿರುವ ನಿರೀಕ್ಷೆಯಂತೆ ಜನರ ಕಲ್ಯಾಣ ಮಾಡುವುದು ನಮ್ಮ ಗುರಿ. ಈ ಹಿಂದಿನ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ದುಡಿಯುವ ವರ್ಗದ ಜನರ ಜೀವನ ಸಂಕಷ್ಟದಲ್ಲಿದೆ. ಅವರ ಮೇಲೆ ಯದ್ವಾ ತದ್ವಾ ಟ್ಯಾಕ್ಸ್ ಹಾಕಿ, ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದ್ದರಿಂದ ಇವತ್ತು ಬಡವರ ಜೀವನ ಕಷ್ಟವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ, ರೈತರ ಆದಾಯ ಕುಸಿದು ಬೀಳುವಂತೆ ಮಾಡಿದ್ದಾರೆ. ದ್ವಿಗುಣ ಅಲ್ಲ, ದೇಶದ ರೈತರ ಆದಾಯ ಅರ್ಧವಾಗಿದೆ. ಇಂತಹ ಸಂಕಷ್ಟದಲ್ಲಿ ಜನ ಬದುಕುತ್ತಿರುವಾಗ, ಜನರ ನೆರವಿಗೆ ಬರಬೇಕು ಎಂದು ನಾವು ಅಧಿಕಾರಕ್ಕೆ ಬಂದಿದ್ದೇವೆ. ಹಾಗಾಗಿ ಅದೇ ನಮಗೆ ಮುಖ್ಯವಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಪ್ರತಿಯೊಬ್ಬರಿಗೂ ಸಣ್ಣಪುಟ್ಟ ಆಸೆಗಳು ಇರುತ್ತವೆ ಎಂದು ಸಮರ್ಥಿಸಿಕೊಂಡರು.
ತಹಸೀಲ್ದಾರ್, ಎಸಿ ಹಂತದಲ್ಲಿ ಸುಮಾರು ತಕರಾರುಗಳು ಬಾಕಿ ಇವೆ. ಪ್ರತಿ ತಿಂಗಳು ಎಷ್ಟು ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ತಿಳಿಸಿದ್ದೇವೆ. ಕೋರ್ಟ್ ತಡೆ ಇಲ್ಲದ ಪ್ರಕರಣಗಳನ್ನು ಹೊರತುಪಡಿಸಿ ತಕರಾರು ಬಂದ ಪ್ರಕರಣಗಳನ್ನು ಮಾತ್ರ 90 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಇನ್ನುಳಿದಂತೆ ಒಂದೇ ದಿನದಲ್ಲಿ ಇತ್ಯರ್ಥವಾಗುವ ಪ್ರಕರಣಗಳನ್ನು ಅಂದೇ ಇತ್ಯರ್ಥಪಡಿಸಬೇಕು. ಯಾವತ್ತಿನ ದಿನ ವಿಚಾರಣೆ ಮುಗಿಯುತ್ತದೆಯೋ ಅದೇ ದಿನ ಆದೇಶ ಹೊರಡಿಸಬೇಕು. ಆಡಳಿತ ಸುಧಾರಣೆಗೆ ಕೆಲವು ಸೂಚನೆ ಕೊಟ್ಟಿದ್ದೇವೆ ಎಂದರು.
ಮುಂಗಾರು ಸ್ವಲ್ಪ ಚೇತರಿಕೆ ಕಂಡಿದೆ. ಇನ್ನು ಹತ್ತು ದಿನಗಳಲ್ಲಿ ಸುಧಾರಣೆ ಆಗಬಹುದು ಎಂದು ಹವಾಮಾನ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಲಾಶಯಗಳಲ್ಲಿ ನೀರು ಕಡಿಮೆ ಇದ್ದರೂ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ನೀರಿನ ಸಮಸ್ಯೆ ಕಂಡುಬಂದ ಕಡೆಗಳಲ್ಲಿ 24 ಗಂಟೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಆದೇಶ ನೀಡಲಾಗಿದೆ.
ಸದ್ಯಕ್ಕೆ 311 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು 387 ಖಾಸಗಿ ಕೊಳವೆಬಾವಿಗಳ ಮೂಲಕವೂ ನೀರು ಪೂರೈಸಲಾಗುತ್ತಿದೆ. ಬಿತ್ತನೆ ಚುರುಕುಗೊಳ್ಳಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ನಿಗಾವಹಿಸಲಾಗಿದೆ. ಬೆಳೆಹಾನಿ ಪರಿಹಾರ ಮಾರ್ಗಸೂಚಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಜೂನ್ 13ರಂದು ದೆಹಲಿಯಲ್ಲಿ ಜರುಗಿದ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಎಸ್ ಡಿ ಆರ್ ಎಫ್ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಅಗತ್ಯತೆಯನ್ನು ಮನವರಿಕೆ ಮಾಡಲಾಗುವುದು. ಮುಖ್ಯಮಂತ್ರಿಗಳು ಕೂಡ ಕೇಂದ್ರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೆಲವು ಅಶಿಸ್ತಿನ ನಿರ್ಣಯಗಳಿಂದ ಜಲಾಶಯಗಳಲ್ಲಿ ನೀರಿನ ಕೊರತೆಗೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ವರದಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು. ನವೆಂಬರ್ ತಿಂಗಳವರೆಗೂ ಜಲಾಶಯಗಳು ತುಂಬಿದ್ದರೂ ಈಗ ನೀರು ಖಾಲಿಯಾಗಿವೆ. ನಿರ್ವಹಣೆಯಲ್ಲಿ ಬಹಳಷ್ಟು ಅಶಿಸ್ತು ಕಂಡು ಬಂದಿದೆ. ಜುಲೈ ತಿಂಗಳಲ್ಲಿ ಏನಾದರು ನೀರಿನ ಕೊರತೆ ಆದರೆ ಅದಕ್ಕೆ ನಿರ್ವಹಣೆಯ ಅಶಿಸ್ತೆ ಕಾರಣವಾಗುತ್ತದೆ. ಯಾರಿಂದ ಆಗಿದೆ ಎಂದು ವರದಿ ಕೇಳಿದ್ದೇನೆ. ಶಾಸಕರು ವೋಟ್ ಗಾಗಿ ಬಳಸಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಏನಾಗಿದೆ ಎಂಬುದು ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.
ಇದನ್ನೂ ಓದಿ:ಪ್ರತಿ ತಿಂಗಳು ಕಂದಾಯ ಪ್ರಗತಿ ಪರಿಶೀಲನೆ, ಜನಪರ ಯೋಜನೆಗಳಿಗೆ ಆದ್ಯತೆ: ಸಚಿವ ಕೃಷ್ಣ ಭೈರೇಗೌಡ