ಬೆಳಗಾವಿ:ಮುಂಬರುವ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲೆಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಆಯ್ಕೆಯಾಗುವ ಅಭ್ಯರ್ಥಿಯ ನಾಯಕತ್ವದಡಿ ಆಯಾ ಮತ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕು. ತಾಲೂಕು ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸತ್ಯವನ್ನು ತಲುಪಿಸುವ ಕೆಲಸ ಮಾಡಿ:
ಎದುರಾಳಿ ಪಕ್ಷದವರಿಗೆ ತಕ್ಕ ಉತ್ತರ ನೀಡಲು ನಮ್ಮ ಕಾರ್ಯಕರ್ತರು ಸಜ್ಜಾಗಬೇಕು. ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿಗಳನ್ನು ಭಿತ್ತರಿಸುತ್ತಿರುವವರ ವಿರುದ್ಧ ತಾವು ಜಾಗೃತರಾಗಿ, ಜನರಿಗೆ ಸತ್ಯವನ್ನು ತಲುಪಿಸುವ ಕೆಲಸ ಮಾಡಬೇಕು. ಕಳೆದ 7 ವರ್ಷಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮೋದಿ ಸರ್ಕಾರ ಜನಸಾಮಾನ್ಯರ ಜೀವನ ಸುಧಾರಿಸುವ ಕೆಲಸ ಮಾಡುತ್ತಿಲ್ಲ. ಆದರೂ, ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವಕರಿಗೆ ಮತದಾನದ ಹಕ್ಕು ನೀಡಿದ್ದೇ ಕಾಂಗ್ರೆಸ್:
ಕಾಂಗ್ರೆಸ್ ಹಾಗು ಬಿಜೆಪಿಯಲ್ಲಿ ಯಾವ ಪಕ್ಷ ಉತ್ತಮ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈಗಿನ ಯುವಕರು ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಯುವಕರಿಗೆ ಮತದಾನದ ಹಕ್ಕನ್ನು ನೀಡಿದ್ದೇ ಕಾಂಗ್ರೆಸ್ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, 21 ವರ್ಷವಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದ್ದರು. ಇದರಿಂದ 18 ವರ್ಷ ಮೇಲ್ಪಟ್ಟ ಯುವಕರಿಗೂ ಮತದಾನದ ಹಕ್ಕು ಸಿಗುವಂತಾಯಿತು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ:ರಾಜಕಾರಣ ಸಾರ್ವಜನಿಕರ ಮತ್ತು ರಾಜಕಾರಣಿಗಳ ನಿದ್ದೆ ಕೆಡಿಸುತ್ತದೆ : ಡಾ. ಶಿವಮೂರ್ತಿ ಸ್ವಾಮೀಜಿ