ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಆಗಿಲ್ಲ. ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ನಯಾಪೈಸೆಯಷ್ಟೂ ಕೆಲಸ ಆಗಿಲ್ಲ. ಸರ್ಕಾರ ಕೇವಲ ಸಲಹೆ ಪಡೆಯುವುದರಲ್ಲೇ ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿ ಶಾಸಕರು ಇಂದು ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿ, ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಕಲ್ಪನೆಯನ್ನು ಸಾಕಾರಗೊಳಿಸಲು ಆಸಕ್ತಿ ತೋರಿಸಿದ್ದಾರೆ. ಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಅವುಗಳನ್ನು ಕ್ರೋಢೀಕರಿಸಲು 8 ಶೈಕ್ಷಣಿಕ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಚಿವರ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ಸದಸ್ಯರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸತೀಶ್ ರೆಡ್ಡಿ, ಮುನಿರತ್ನ, ಎಸ್.ಆರ್.ವಿಶ್ವನಾಥ್ ಮತ್ತಿತರ ಸದಸ್ಯರು, "ಸರ್ಕಾರ ರಚನೆಯಾಗಿ 6-7 ತಿಂಗಳಾಗಿದೆ. ಇನ್ನೂ ಅಭಿವೃದ್ಧಿ ಸಲಹೆ ಪಡೆಯುವುದರಲ್ಲೇ ಕಾಲಹರಣ ಮಾಡಲಾಗುತ್ತಿದೆ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮುನಿರತ್ನ, "ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಸಂಚಾರದಟ್ಟಣೆಯಲ್ಲಿ ಎರಡೂವರೆ ಗಂಟೆಗಳ ಕಾಲ ಒದ್ದಾಡಬೇಕಿದೆ. ಹೆಬ್ಬಾಳ ಮೇಲ್ಸೇತುವೆ ಯೋಜನೆ ಪೂರ್ಣಗೊಳಿಸಲು ಇನ್ನೂ ಎಷ್ಟು ಸಮಯ ಬೇಕು" ಎಂದು ಪ್ರಶ್ನಿಸಿದರು. ಆಗ ಆಡಳಿತಪಕ್ಷದ ಶಾಸಕರಾದ ಎನ್.ಎ.ಹ್ಯಾರಿಸ್, ಎಚ್.ಸಿ.ಬಾಲಕೃಷ್ಣ ಮತ್ತಿತರರು 9 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲೂ ವಿವಿಧ ಹಂತಗಳಲ್ಲಿ 9 ವರ್ಷ ಸರ್ಕಾರ ನಡೆಸಿದ್ದೀರಾ? ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಕೊಡುಗೆಗಳೇನು? ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ" ಎಂದು ತಿರುಗೇಟು ನೀಡಿದರು.
ಬ್ರ್ಯಾಂಡ್ ಬೆಂಗಳೂರು ಮೂಲಕ ಒಳ್ಳೆಯ ಕೆಲಸ ಮಾಡಲು ಮುಂದಾಗಿದ್ದರೂ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಆಡಳಿತ ಪಕ್ಷದ ಶಾಸಕರು ಆಕ್ರೋಶ ಹೊರಹಾಕಿದರು. ನಾವು ಬ್ರ್ಯಾಂಡ್ ಬೆಂಗಳೂರಿಗೆ ವಿರೋಧ ಮಾಡಿಲ್ಲ. ಆದರೆ ಸಲಹೆ ಪಡೆಯುವುದರಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪ್ರತಿಪಕ್ಷದ ಶಾಸಕರು ಹೇಳಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
"ಫ್ಲೈಓವರ್ ಯೋಜನೆಗೆ ಬಿಜೆಪಿಯವರು ವಿರೋಧ ಮಾಡಿದ್ದರು. ಈಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಸಮಸ್ಯೆಯಾಗುತ್ತಿದೆ ಎಂದು ಮಾತನಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ಕೊಟ್ಟರು. ಹೆಬ್ಬಾಳ ಫ್ಲೈಓವರ್ ಯೋಜನೆಗೆ ಯಾವುದೇ ವಿರೋಧ ಇಲ್ಲ. ಹೆಬ್ಬಾಳದಿಂದ ಚಾಲುಕ್ಯ ವೃತ್ತದವರೆಗೂ ಸ್ಟೀಲ್ ಬ್ರಿಡ್ಜ್ ಮಾಡಲು ಬೆಂಗಳೂರಿನ ಜನರೇ ವಿರೋಧ ವ್ಯಕ್ತಪಡಿಸಿದ್ದರು" ಎಂದು ಬಿಜೆಪಿ ಶಾಸಕರು ಸ್ಪಷ್ಟನೆ ನೀಡಿದರು.
'ಬ್ರ್ಯಾಂಡ್ ಬೆಂಗಳೂರು' ಯೋಜನೆ: "ಆರೋಪ-ಪ್ರತ್ಯಾರೋಪಗಳ ಬಳಿಕ ಸಮಜಾಯಿಷಿ ನೀಡಿದ ರಾಮಲಿಂಗಾರೆಡ್ಡಿ, ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಯೋಜನಾಬದ್ಧವಾಗಿ ಹೊಸರೂಪ ನೀಡಲು "ಬ್ರ್ಯಾಂಡ್ ಬೆಂಗಳೂರು" ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರು ನಗರ ಈ ಹಿಂದೆ ಗಾರ್ಡನ್ ಸಿಟಿ, ಪ್ಯಾರಡೈಸ್ ಆಫ್ ಪೆನ್ಷನರ್ಸ್, ಹಾಸ್ಪಿಟಲ್ ಹಬ್, ಐಟಿ ಹಬ್, ಎಜುಕೇಶನ್ ಹಬ್ ಆಗಿ ಹೆಸರು ಮಾಡಿತ್ತು. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ವಿಶ್ವ ನಾಯಕರು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ತೆರಳುತ್ತಿದ್ದರು."
"ಬೆಂಗಳೂರಿನ ಸ್ವರೂಪವನ್ನು ಬದಲಿಸಲು ನಮ್ಮ ಉಪಮುಖ್ಯಮಂತ್ರಿಗಳು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಮೂಲಕ ಕೆಲಸ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಸಂಘ ಸಂಸ್ಥೆಗಳು, ಎಲ್ಲಾ ವರ್ಗದ ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಸುಗಮ ಸಂಚಾರ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯ ಬೆಂಗಳೂರು, ಜನಹಿತ ಬೆಂಗಳೂರು, ಶೈಕ್ಷಣಿಕ ಬೆಂಗಳೂರು, ತಂತ್ರಜ್ಞಾನ ಮತ್ತು ಮಾಹಿತಿ ಬೆಂಗಳೂರು, ಹಸಿರು ಬೆಂಗಳೂರು, ಜಲ ಸುರಕ್ಷ ಬೆಂಗಳೂರು ಬಗ್ಗೆ 70 ಸಾವಿರ ಸಲಹೆಗಳನ್ನು ಸಂಗ್ರಹಿಸಲಾಗಿದೆ. ಈ ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಸಲಹೆಗಳನ್ನು ವಿವಿಧ ಸಂಸ್ಥೆಗಳಿಗೆ ಅಧ್ಯಯನಕ್ಕೆ ನೀಡಲಾಗಿದೆ. ಈ ಸಂಸ್ಥೆಗಳು ವರದಿ ನೀಡಿದ ನಂತರ ಈ ಕುರಿತ ಸಲಹೆಗಳನ್ನು ಜಾರಿಗೊಳಿಸಲಾಗುವುದು" ಎಂದು ವಿವರಿಸಿದರು.
"ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಸಮನ್ವಯ ಸಮಿತಿ ರಚನೆ ಮಾಡಲಾಗುವುದು. ಸರ್ಕಾರದ ಮುಖ್ಯಕಾರ್ಯದರ್ಶಿಗಳ ಮಟ್ಟದಲ್ಲಿ ಬೃಹತ್ ಬೆಂಗಳೂರು ಕಾರ್ಯಕಾರಿ ಸಮಿತಿ ಮಾಡಿ ಬೆಂಗಳೂರನ್ನು ಹೊಸ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ನಮ್ಮ ಉಪ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ನಾವು ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಮುಂದೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದು, ಇದು ವಿರೋಧ ಪಕ್ಷದ ನಾಯಕರಿಗೆ ಅರ್ಥವಾಗುತ್ತಿಲ್ಲ" ಎಂದರು.
"ಬೆಂಗಳೂರಿನ ಅಭಿವೃದ್ಧಿಯನ್ನು ಯೋಜನಾ ಬದ್ಧವಾಗಿ ಮಾಡಲು ನಾವು ಬದ್ಧ. ಇದಕ್ಕೆ ಎಲ್ಲಾ ಪಕ್ಷಗಳ ಸಹಕಾರ ಮುಖ್ಯ. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಏನೂ ಕೆಲಸ ಆಗಿಲ್ಲ ಎನ್ನುತ್ತೀರಿ. ನಿಮ್ಮ ಸರ್ಕಾರ 25 ಸಾವಿರ ಕೋಟಿ ಸಾಲ ಮಾಡಿಟ್ಟು ಹೋಗಿದ್ದೀರಿ. ಅದರ ಜೊತೆಗೆ ಬಿಲ್ ಬಾಕಿ. ನಗರೋತ್ಥಾನ, ವಾರ್ಡ್ ಅನುದಾನ ಸೇರಿದಂತೆ ಸಾಲ ಹೆಚ್ಚು ಮಾಡಿದ್ದೀರಿ. ಮುನಿರತ್ನ ಅವರು ಮೆಲ್ಸೇತುವೆ ವಿಚಾರವಾಗಿ ಮಾತನಾಡುತ್ತಿದ್ದರು. ಇದೇ ಚಾಲುಕ್ಯ ಸರ್ಕಲ್ ಮೇಲ್ಸೆತುವೆಗೆ ವಿರೋಧ ಮಾಡಿದವರೇ ಬಿಜೆಪಿಯವರು" ಎಂದು ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ:25 ಸಾವಿರ ಸ್ಮಾರಕಗಳ ರಕ್ಷಣೆಗೆ ಕ್ರಮ, ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಹೆಚ್.ಕೆ.ಪಾಟೀಲ್