ಬೆಳಗಾವಿ: ಚುಚ್ಚುಮದ್ದು ಪಡೆದು ರಾಮದುರ್ಗ ತಾಲೂಕಿನ ಮೂವರು ಕಂದಮ್ಮಗಳ ಸಾವು ಪ್ರಕರಣ ಸಂಬಂಧ ಮೂರು ದಿನದೊಳಗೆ ಸಮಗ್ರ ವರದಿ ನೀಡಬೇಕು ಹಾಗೂ ವೈದ್ಯಾಧಿಕಾರಿ ವಿರುದ್ಧ ಮೂರು ದಿನದೊಳಗೆ ಕ್ರಮ ಕೈಗೊಳ್ಳುವಂತೆ ಸಚಿವ ಗೋವಿಂದ ಕಾರಜೋಳ ಡಿಎಚ್ಒ ಡಾ. ಶಶಿಕಾಂತ ಮುನ್ಯಾಳ ಅವರಿಗೆ ನಿರ್ದೇಶನ ನೀಡಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಘಟನೆ ಪ್ರಸ್ತಾಪಿಸಿದ ಸಚಿವ ಗೋವಿಂದ ಕಾರಜೋಳ ಅವರು, ಇದಕ್ಕೆ ಕಾರಣರಾದ ವೈದ್ಯಾಧಿಕಾರಿ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ಬಗ್ಗೆ ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಎಚ್ಓ ಡಾ.ಮುನ್ಯಾಳ ವಿವರಿಸಿದರು. ಲಸಿಕೆಯ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಇನ್ನೂ ವರದಿ ಬಂದಿರುವುದಿಲ್ಲ ಎಂದರು. ಸಮರ್ಪಕವಾಗಿ ಮಾಹಿತಿ ನೀಡದ ಡಿಎಚ್ಓ ಬಗ್ಗೆ ಅಸಮಾಧಾನಗೊಂಡ ಸಚಿವ ಗೋವಿಂದ ಕಾರಜೋಳ ಅವರು, ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರಿಗೆ ಕರೆ ಮಾಡಿ ಬೆಳಗಾವಿಗೆ ಬೇರೆ ಅಧಿಕಾರಿ ನಿಯೋಜಿಸುವಂತೆ ನಿರ್ದೇಶನ ನೀಡಿದರು.