ಬೆಳಗಾವಿ:ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ. ಆದ್ರೆ ಸಾವು-ಬದುಕು ನಮ್ಮ ಕೈಯಲ್ಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಸಾವು ಬದುಕು ನಮ್ಮ ಕೈಯಲ್ಲಿಲ್ಲ: ಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯ ಜಿಪಂ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವು-ಬದುಕು ನಮ್ಮ ಕೈಯಲ್ಲಿಲ್ಲ. ಸೋಂಕಿತರೇ ಹೋರಾಟ ಮಾಡಿ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಬೀಮ್ಸ್ ಅವ್ಯವಸ್ಥೆ ಬಗ್ಗೆ ಪರಿಶೀಲಿಸಲು ಕೋವಿಡ್ ವಾರ್ಡ್ಗೆ ಹೋಗುವಿರಾ ಎಂದು ಕೇಳಿದ ಪ್ರಶ್ನೆಗೆ, ಮೊದಲು ನೀವೇ ಹೋಗಿ ನೋಡಿ ಎಂದರು. ತಮ್ಮ ಹೇಳಿಕೆಯನ್ನು ಮತ್ತೆ ಸರಿಪಡಿಸಿಕೊಂಡ ಅವರು, ನಾನು ರೆಡಿ ಇದ್ದೇನೆ. ನೀವು ಬರೋಕೆ ರೆಡಿಯಿದ್ದೀರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಬಳಿಕ ಬೀಮ್ಸ್ ಅವಾಂತರದ ಬಗ್ಗೆ ಚರ್ಚೆ ನಡೆಸುತ್ತೇವೆ. ಆ್ಯಂಬುಲೆನ್ಸ್ ಸುಟ್ಟಿರುವ ಪ್ರಕರಣಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಕೋವಿಡ್ ಜೊತೆ ಬದುಕುವುದನ್ನು ನಾವು ಕಲಿಯಬೇಕಿದೆ. ಕೋವಿಡ್ ಗಂಭೀರ ರೋಗವೇನಲ್ಲ. ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕಾಗಿ ಡಿಸಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.
ಸಿಎಂ ಬದಲಾವಣೆ ಆಗಲ್ಲ:
ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿ ಅಧಿಕಾರ ಪೂರೈಸಲಿದ್ದಾರೆ. ಮುಂದಿನ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ಹೋಗಲಿದ್ದೇವೆ. ಗಡ್ಕರಿ ಭೇಟಿಗಾಗಿ ಡಿಸಿಎಂ ಸವದಿ ದೆಹಲಿಗೆ ಹೋಗಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಪ್ರತಿಪಕ್ಷ ತನ್ನ ಕೆಲಸ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಯಡಿಯೂರಪ್ಪ ವಿಶೇಷ ಸಂದರ್ಭದಲ್ಲಿ ಚುಕ್ಕಾಣಿ ಹಿಡಿದು, ಸಾಲು ಸಾಲು ಸವಾಲನ್ನು ಗಟ್ಟಿಯಾಗಿ ಎದುರಿಸಿದ್ದಾರೆ. ರಾಜ್ಯದ ಜನರ ಆಶೀರ್ವಾದದಿಂದ ಸರ್ಕಾರ ಒಂದು ವರ್ಷ ಅವಧಿ ಪೂರೈಸಿದೆ. ನಮ್ಮ ಸರ್ಕಾರ ರಾಜ್ಯದ ಜನರ ಮನಸ್ಸು ಗೆದ್ದಿದೆ. ಮುಂದೆಯೂ ರಾಜ್ಯದ ಅಭಿವೃದ್ಧಿ ಆಗಲಿದೆ ಎಂದರು.