ಚಿಕ್ಕೋಡಿ: ಬಡ್ಡಿ ಹಣ ನೀಡುವಂತೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣ ಹೊರವಲಯದ ಸ್ಟಾರ್ ಡಾಬಾದಲ್ಲಿ ನಡೆದಿದೆ.
ನಿಪ್ಪಾಣಿ ಪಟ್ಟಣದ ರವೀಂದ್ರ ಕಾಂಬಳೆ (30) ಎಂಬಾತನ ತಲೆ ಮೇಲೆ ಕುರ್ಚಿ ಎತ್ತಿ ಹಾಕಿ ಸ್ಟಾರ್ ಡಾಬಾ ಮಾಲೀಕ ರಮೇಶ ಕಾಂಬಳೆ ಸೇರಿದಂತೆ 5ಕ್ಕೂ ಹೆಚ್ಚು ಜನ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಡ್ಡಿ ಹಣ ನೀಡುವಂತೆ ಮಾರಣಾಂತಿಕ ಹಲ್ಲೆ ಹಲ್ಲೆಯಿಂದ ತೀವ್ರ ಗಾಯಗೊಂಡ ರವೀಂದ್ರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ರವೀಂದ್ರನ ಬಳಿ ₹ 40 ಸಾವಿರಕ್ಕೆ ₹1 ಲಕ್ಷದಷ್ಟು ಬಡ್ಡಿ ವಸೂಲಿಗೆ ಡಾಬಾ ಮಾಲೀಕ ರಮೇಶ ಮುಂದಾಗಿದ್ದ ಎನ್ನಲಾಗಿದೆ.
₹ 80 ಸಾವಿರ ಸಾಲವನ್ನು ರಮೇಶ ಬಳಿ ಪಡೆದಿದ್ದ ಹಲ್ಲೆಗೊಳಗಾದ ರವೀಂದ್ರ ₹ 80 ಸಾವಿರ ಪೈಕಿ ₹ 40 ಸಾವಿರ ಹಣವನ್ನು ಮಾಲೀಕನಿಗೆ ಮರಳಿಸಿದ್ದನಂತೆ. ಮತ್ತೆ ಅಸಲು ಬಡ್ಡಿ ಸೇರಿ ₹1.20 ಲಕ್ಷ ಹಣ ನೀಡುವಂತೆ ಧಮ್ಕಿ ಹಾಕಿದ ರಮೇಶ, ಹಣ ಮರಳಿ ನೀಡದ್ದರಿಂದ ಡಾಬಾಗೆ ಕರೆಸಿಕೊಂಡು ತನ್ನ ಸಹೋದ್ಯೋಗಿಗಳಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಸವೇಶ್ವರ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.