ಅಥಣಿ:ತಾಲೂಕಿನಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದಂತೆ ಡಿಸಿಎಂ ಲಕ್ಷ್ಮಣ ಸವದಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತದ ಜೊತೆ ಸಭೆ ನಡೆಸಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಚಿಕ್ಕೋಡಿ, ಅಥಣಿ, ಕಾಗವಾಡ ಉಪವಿಭಾಗದ ಅಧಿಕಾರಿಗಳ ಜೊತೆ ಸಭೆನಡೆಸಿದ ಡಿಸಿಎಂ, ಸಭೆ ಉದ್ದಕ್ಕೂ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ತಲೆಹಾಕಿದ ಡಿಸಿಎಂ, ಅದರಲ್ಲೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಗಳ ಮಾಹಿತಿ ಕೇಳಿದರು. ಈ ವೇಳೆ ಅಥಣಿ ತಾಲೂಕು ಆಡಳಿತಕ್ಕೆ ಸರಿಯಾದ ಅಂಕಿ-ಅಂಶಗಳ ಕೊರತೆಯಾದುದ್ದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಅಧಿಕಾರಿಗಳಿಗೆ ಕೊರೊನಾ ಸಂಬಂಧಿತ ಮಾಹಿತಿ ಕೊರತೆಯಿಂದ ಡಿಸಿಎಂ ಸವದಿ ಸಿಡಿಮಿಡಿಗೊಂಡು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ಥೂ ಅಂತ ಉಗಿತಿದ್ದಾರೆ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಬೆಡ್ ಖಾಲಿ ಇದ್ದರೂ ಯಾಕೆ ಸರ್ಕಾರಿ ಆಸ್ಪತ್ರೆಗೆ ಬರುತ್ತಿಲ್ಲ? ಜೊತೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಥಣಿ ತಾಲೂಕು ಆಡಳಿತ ಕೊರೊನಾ ಎರಡನೇ ಅಲೆ ತಡೆಗಟ್ಟಲು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಎಚ್ಚರಿಕೆ ವಹಿಸಿ ಎಂದು ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಕೊರೊನಾ ಸಂದರ್ಭದಲ್ಲಿ ಜನತೆಯ ರಕ್ಷಣೆ ಮಾಡುವುದು ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ. ದಯವಿಟ್ಟು ರಕ್ಷಣೆಗೆ ಒತ್ತು ನೀಡಿ ಎಂದರು.
ಮಹಾರಾಷ್ಟ್ರ ಗಡಿಗೆ ಹೊಂದಿರುವ ಅಥಣಿಗೆ ಯಾವ ಭದ್ರತೆ ನಿಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ 9 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕಾಗವಾಡ, ಅಥಣಿ ತಾಲೂಕಿನಲ್ಲಿ ಗಡಿ ರಸ್ತೆ ಬಂದ್ ಮಾಡಲಾಗಿದೆ ಎಂದು ಡಿವೈಎಸ್ಪಿ ಎಸ್.ವಿ.ಗಿರೀಶ್ ಸಭೆಯಲ್ಲಿ ಸವದಿ ಅವರಿಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಫೋನಿನಲ್ಲಿ ಮಾತನಾಡುತ್ತಾ ಇದ್ದ ಅಧಿಕಾರಿಯನ್ನು ಹೊರ ಹಾಕಿದ ಘಟನೆ ಕೂಡ ಜರುಗಿತು.