ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಿರುವುದು ಬೆಳಗಾವಿ: ಉತ್ತರ ಕರ್ನಾಟಕ ಕುರಿತು ಅಧಿವೇಶನದಲ್ಲಿ ಚರ್ಚೆ ವಿಚಾರಕ್ಕೆ ಯಾರೇ ಶಾಸಕರು ಏನೇ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಿದರೂ, ಅದಕ್ಕೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ನಮ್ಮದು ಸಮಗ್ರ ಕರ್ನಾಟಕ. ವಿಧಾನಸಭೆಯಲ್ಲಿ ಸಹಕಾರ ಕೊಡಲು ನಾವು ಸಿದ್ಧರಿದ್ದೇವೆ ಎಂದರು.
ಅಥಣಿ ಜಿಲ್ಲೆಗೆ ಆಗ್ರಹಿಸಿ ಇಂದು ಬಂದ್ಗೆ ಕರೆ ನೀಡಿರುವುದಕ್ಕೆ ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾವನೆ ಬರಲಿ. ಆ ಬಗ್ಗೆ ಖಂಡಿತವಾಗಿಯೂ ಚರ್ಚಿಸುತ್ತೇವೆ ಎಂದು ತಿಳಿಸಿದರು.
ಸುವರ್ಣಸೌಧ ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ತೆರವು ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ, ಈ ಬಗ್ಗೆ ಅವರ ಬಳಿಯೇ ಮಾತನಾಡಿ ಎಂದು ಹೇಳಿ ನುಣುಚಿಕೊಂಡರು. ಕಲಾಪದಲ್ಲಿ ಬಿಜೆಪಿ ನಾಯಕರ ಮಧ್ಯೆ ಒಮ್ಮತ ಮೂಡದ ಬಗ್ಗೆ ಮಾತನಾಡಲು ಇಚ್ಛಿಸದ ಡಿಸಿಎಂ, ಅವರ ಪಕ್ಷದ ವಿಚಾರ ಅವರಿಗೆ. ನಮಗೆ ಬೇಡ ಎಂದು ಹೇಳಿದರು.
ಹೆಚ್ಡಿಕೆ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ: ಸರ್ಕಾರ ಪತನ ಮಾಡಬೇಕು ಎಂಬುದು ಅವರ ರಾಜಕಾರಣವಾದರೆ, ನಾವೇನು ಹೇಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, 50-60 ಶಾಸಕರೊಂದಿಗೆ ಬಿಜೆಪಿ ಸೇರಲು ಪ್ರಭಾವಿ ಸಚಿವರೊಬ್ಬರಿಂದ ಪ್ರಯತ್ನ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಜೆಡಿಎಸ್ ಅನ್ನು ಜನ ಹೀನಾಯವಾಗಿ ಸೋಲಿಸಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದು ಗೌರವಯುತವಾಗಿ ಜನರ ಕೆಲಸ ಮಾಡಬೇಕು. ಜನ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಇಲ್ಲದೆ ಇರೋಕಾಗಲ್ಲ ಎಂದು ಈ ರೀತಿ ವರ್ತಿಸಿದರೆ ಶೋಭೆ ತರಲ್ಲ" ಎಂದು ಕಿಡಿಕಾರಿದರು.
"ಕಳೆದ ಚುನಾವಣೆಯಲ್ಲಿ ಏನಾಯ್ತು ಎಂದು ತಿಳಿದುಕೊಂಡು ಹೆಜ್ಜೆ ಇಡಲಿ. ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಜನರಿಗಾಗಿ, ಜನರಿಗೋಸ್ಕರ ಜನರ ಪರ ವಿಪಕ್ಷವಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಜನರ ತೀರ್ಪು ಗೌರವಿಸಬೇಕು. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುತ್ತದೆ. ಅದಕ್ಕೆ ಕಾದು, ಸರ್ಕಾರ ಬೀಳಿಸುವುದು ಒಂದೇ ಉದ್ದೇಶ ಎಂದು ಕುಳಿತರೆ ರಾಜಕಾರಣ ಅಷ್ಟೇನಾ?" ಎಂದು ಪ್ರಶ್ನಿಸಿದರು.
"ವಿಪಕ್ಷನೂ ಅಷ್ಟೇ ಮುಖ್ಯವಾಗಿದೆ. ಸರ್ಕಾರ ಚೆನ್ನಾಗಿ ಕೆಲಸ ಮಾಡಲು ವಿಪಕ್ಷ ಬಹಳ ಮುಖ್ಯ. ಅದರ ಜವಾಬ್ದಾರಿಯನ್ನು ನಿಭಾಯಿಸಲಿ. ಅಧಿಕಾರ ಬೇಕು, ಮಂತ್ರಿಯಾಗಬೇಕು, ಅವರ ಮಗ ಸಿಎಂ ಆಗಬೇಕು, ನಾನು ಸಿಎಂ ಆಗಬೇಕು ಎಂದು ಅದನ್ನೇ ಮಾತನಾಡುತ್ತಾ ಕೂತರೆ ಹೇಗೆ?. ವಿರೋಧ ಪಕ್ಷದ ಜವಾಬ್ದಾರಿಯನ್ನು ಅವರು ನಿಭಾಯಿಸಲಿ. ಅದನ್ನು ಬಿಟ್ಟು ಈ ರೀತಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರಲ್ಲ" ಎಂದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಎಚ್ಡಿಕೆ ಹೊಗಳಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಅವರ ವೈಯಕ್ತಿಕ ರಾಜಕಾರಣ, ಅವರಿಗೆ ಅನಿವಾರ್ಯ ಆಗಿರಬಹುದು. ಶಕ್ತಿ ಕಡಿಮೆಯಾಗಿದೆ, ಶಕ್ತಿ ವೃದ್ಧಿಗೊಳಿಸಲು ಹೀಗೆ ಮಾಡಿರಬಹುದು. ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ" ಎಂದು ಹೇಳಿದರು.
ಇದನ್ನೂ ಓದಿ:ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಡಿ.13ರಂದು ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ