ಬೆಳಗಾವಿ:ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಬೆಳಗಾವಿಯಲ್ಲಿರುವ ಮನೆಗೆ ಕಳೆದ ರಾತ್ರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ ಡಿಕೆಶಿ, ಸವದಿ ಅವರನ್ನು ಸಮಾಧಾನಪಡಿಸಿದರು. ಇದೇ ವೇಳೆ, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿಯೂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಾಸಕ ಬಾಬಾ ಸಾಹೇಬ ಪಾಟೀಲ, ಆಸೀಫ್ ಸೇಠ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಇದ್ದರು. ಮೊದಲ ಬಾರಿಗೆ ಲಕ್ಷ್ಮಣ ಸವದಿ ನಿವಾಸಕ್ಕೆ ಸತೀಶ್ ಜಾರಕಿಹೊಳಿ ಆಗಮಿಸಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಬಂದು ನಮಗೆ ಶಕ್ತಿ ತುಂಬಿದ್ದಾರೆ. ವಿಧಾನಸಭೆ ಚುನಾವಣೆ, ಫಲಿತಾಂಶ ನಂತರ ಸರಕಾರ ರಚನೆಯ ಬಿಡುವಿಲ್ಲದ ಕಾರ್ಯಕ್ರಮಗಳ ಕಾರಣದಿಂದ ಅವರನ್ನು ಮಾತನಾಡಿಸಲು ಆಗಿರಲಿಲ್ಲ. ಹೀಗಾಗಿ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮಾತನಾಡಿಸಲು ಬೆಳಗಾವಿಗೆ ಆಗಮಿಸಿದ್ದೇನೆ ಎಂದು ತಿಳಿಸಿದರು.
ಸವದಿ ಅವರಿಗೆ ಬೇಸರವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯಾರಿಗೂ ಬೇಸರವಿಲ್ಲ. ನಾನೊಬ್ಬ ಪಕ್ಷದ ಅಧ್ಯಕ್ಷನಾಗಿ, ಸಿನಿಯರ್ ಲೀಡರ್ ಆಗಿ ಬಂದಿದ್ದೇನೆ. ಲಕ್ಷ್ಮಣ ಸವದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ ಅಷ್ಟು ಮಾತ್ರ ಹೇಳುತ್ತೇನೆ. ಯಾವಾಗ, ಏನು ಅಂತಾ ಕೇಳಬೇಡಿ ಎಂದು ಹೇಳಿದರು. ಸವದಿ, ಶೆಟ್ಟರ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಇದೆಯೇ ಎಂಬ ಪ್ರಶ್ನೆಗೆ, ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಕಾಂಗ್ರೆಸ್ ಪಕ್ಷ ಕೈ ಹಿಡಿಯುತ್ತದೆ ಎಂದು ಇದೇ ವೇಳೆ ಡಿಕೆಶಿ ಭರವಸೆ ಕೊಟ್ಟರು.