ಬೆಂಗಳೂರು/ಬೆಳಗಾವಿ: "ಬಿಜೆಪಿ ನಾಯಕರಿಗೆ ರಾಜಕಾರಣ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಾಗಲಿ, ಜನರ ಸಮಸ್ಯೆಯಾಗಲಿ ಅಲ್ಲ. ಅವರಿಗೆ ಜನರ ಸಮಸ್ಯೆ ಬಗ್ಗೆ ಆಸಕ್ತಿ ಇಲ್ಲವೆಂದರೆ ನಾವೇನು ಮಾಡೋಕಾಗುತ್ತೆ?" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ. ಸುವರ್ಣಸೌಧದ ಆವರಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಹಾಗೂ ಜನತಾದಳದವರಿಗೆ ಜನರ ಸಮಸ್ಯೆ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಮುಖ್ಯ. ಇಂದು ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ವಿಷಯಗಳನ್ನು ಪ್ರಸ್ತಾಪಿಸಿ, ಉತ್ತರ ಕೊಡಲಿದ್ದಾರೆ. ಆದರೆ ಬಿಜೆಪಿಯವರಿಗೆ ಈ ಬಗ್ಗೆ ಚರ್ಚೆ ಮಾಡಲು ಆಸಕ್ತಿ ಇಲ್ಲದಿದ್ದರೆ ನಾವೇನು ಮಾಡಲು ಸಾಧ್ಯ?. ಬಿಜೆಪಿಗೆ ಕೇವಲ ರಾಜಕಾರಣ ಬೇಕು. ಅವರು ರಾಜಕಾರಣ ಮಾಡಿಕೊಂಡಿರಲಿ, ನಾವು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ" ಎಂದರು.
ಭೋಜನಕೂಟದಲ್ಲಿ ಅನ್ಯ ಪಕ್ಷಗಳ ಶಾಸಕರು ಭಾಗಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಮದುವೆ, ಶುಭ ಸಮಾರಂಭ, ಭೋಜನ ಕೂಟದಲ್ಲಿ ನಾಯಕರು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಸೇರುತ್ತಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ನನ್ನ ಜೊತೆ ಮಾತನಾಡುವುದು, ನಮ್ಮ ಪಕ್ಷದ ನಾಯಕರು ಅವರ ಜೊತೆ ಮಾತನಾಡುವುದು ಸಹಜವಾದುದ್ದು. ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯವಿದ್ದರೂ ಮನುಷ್ಯರ ನಡುವಣ ಬಾಂಧವ್ಯ ಮುಖ್ಯವಾದುದ್ದು. ಸದನದ ಕಲಾಪ ಸಮಯದಲ್ಲೂ ಕೆಲವು ವಿಚಾರಗಳ ಚರ್ಚೆಗೆ ಸಭೆ ಕರೆದಾಗ ವಿರೋಧ ಪಕ್ಷಗಳ ನಾಯಕರನ್ನೂ ಆಹ್ವಾನಿಸುತ್ತೇವೆ. ರಾಜಕೀಯ ಮಾಡಲು ಬಯಸುವವರು ಸಭೆಗೆ ಬರುವುದಿಲ್ಲ. ನಾವು ಸಹಜವಾಗಿ ಭೋಜನ ಕೂಟಕ್ಕೆ ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ. ಕೆಲವರು ಬರುತ್ತಾರೆ, ಕೆಲವರು ನಿರಾಕರಿಸುತ್ತಾರೆ. ನಮಗೆ ಆತ್ಮೀಯರಾಗಿರುವವರನ್ನು ನಾವು ಕರೆಯುತ್ತೇವೆ. ಅದರಲ್ಲಿ ತಪ್ಪೇನಿದೆ?" ಎಂದು ಹೇಳಿದರು.