ಬೆಳಗಾವಿ: ಬರಗಾಲದ ಹಿನ್ನೆಲೆಯಲ್ಲಿ ಬಿಜೆಪಿಯವರು, ವಿಪಕ್ಷ ನಾಯಕರು ಎಲ್ಲೆಡೆ ಓಡಾಡಿದ್ದು, ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. 4ನೇ ದಿನದ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಲು ಬೆಳಗಾವಿಗೆ ಆಗಮಿಸಿದ್ದ ವೇಳೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾನೂನು ಪ್ರಕಾರ ನರೇಗಾ 150 ದಿನ ಕೂಲಿ ಕೊಡಬೇಕು. ಏಕೆ ಅನೌನ್ಸ್ ಮಾಡಿಸುತ್ತಿಲ್ಲ?. ಈಗ ಅವರು ತಿರುಗಿದ ಬರ ವರದಿ ಇಟ್ಟುಕೊಂಡು ದೆಹಲಿಗೆ ಹೋಗಿ ಕೊಡಲಿ. ಬರಗಾಲದ ಕುರಿತು ಅಧ್ಯಯನ ಮಾಡಿ ವರದಿ ಕೊಟ್ಟಿದ್ದೇವೆ. ಇಷ್ಟು ಹಣ ಬೇಕು ಅಂತಾ ಕೇಳಿದ್ದೇವೆ, ಈವರೆಗೆ ಒಂದು ಬಿಡಿಗಾಸು ಕೊಟ್ಟಿಲ್ಲ. ಈಗಾಗಲೇ ಮುಖ್ಯಮಂತ್ರಿ ನಾವು ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ. ಕುಡಿಯುವ ನೀರಿಗೆ, ಮೇವಿಗೆ ಹಿಂದೆ ಮುಂದೆ ನೋಡದೇ ಖರ್ಚು ಮಾಡುವಂತೆ ಹೇಳಿದ್ದಾರೆ ಎಂದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ತೆಲಂಗಾಣ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹತ್ತು ವರ್ಷ ಕೆ.ಚಂದ್ರಶೇಖರ್ ರಾವ್ ರಾಜ್ಯ ನಡೆಸಿದರೂ, ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ್ದಾರೆ. ಇಂದು ಸರ್ಕಾರ ರಚನೆ ಆಗಿದೆ. ಎಲ್ಲರೂ ವಿಷ್ ಮಾಡಿ ಬಂದಿದ್ದೇವೆ. 45 ಶಾಸಕರು ಹೋಗಿ ಮೂರು ತಿಂಗಳು ಅಲ್ಲಿ ಇದ್ದರು. ಅಲ್ಲಿನ ಶಾಸಕರು ಬಂದು ನಮ್ಮಲ್ಲಿ ಕೆಲಸ ಮಾಡಿದರು. ಹದಿನೈದು ಜನರನ್ನು ನಾವು ಅಲ್ಲಿಗೆ ಕಳುಹಿಸಿದ್ದೇವೆ. ರಾಜಕೀಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕಾಗುತ್ತದೆ ಎಂದು ಹೇಳಿದರು.