ಬೆಳಗಾವಿ:ಐದನೇ ಅವಧಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದೆ. ಬ್ಯಾಂಕ್ ಉತ್ತುಂಗಕ್ಕೆ ಒಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ರಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ನಾಯಕರು ನನಗೆ ಮತ್ತೊಂದು ಅವಕಾಶ ಕರುಣಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ. ನಮ್ಮ ನಾಯಕರಲ್ಲಿ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಇದೀಗ ಜಿಲ್ಲಾ ನಾಯಕರು ಒಂದಾಗಿದ್ದೇವೆ. ಈ ಬಾರಿ ಭಿನ್ನಮತ ಅನ್ನೋದು ಎಲ್ಲಿಯೂ ಕಾಣಲಿಲ್ಲ ಎಂದರು.
ಕಳೆದ ಐದು ವರ್ಷಗಳಲ್ಲಿ ಒಂದೇ ಪಕ್ಷದಲ್ಲಿದ್ದು, ನಾವು ಕಹಿ ಅನುಭವ ಅನುಭವಿಸಿದ್ದೇವೆ. ಕಹಿ ಅನುಭವವೇ ನಮ್ಮನ್ನು ಈ ದಾರಿಗೆ ತರಲು ವೇದಿಕೆ ಆಯಿತು. ಒಂದೇ ಪಕ್ಷದಲ್ಲಿದ್ದು ಮೂರು ಮುಖವಾಗಿ ಇರೋದಕ್ಕಿಂತ ಒಂದಾಗಿರಿ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ದೇಶನ ಈ ವೇದಿಕೆಯನ್ನು ಸೃಷ್ಟಿ ಮಾಡಿತು ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ರಮೇಶ್ ಕತ್ತಿ ತಮ್ಮ ವಿರುದ್ಧ ಡಿಸಿಸಿ ಬ್ಯಾಂಕ್ ಕೆಲ ನಿರ್ದೇಶಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಂದೇ ಮನೆಯಲ್ಲಿ ಇರುವುದರಿಂದ ಸ್ವಾಭಾವಿಕವಾಗಿ ಅಸಮಾಧಾನ ಇರುತ್ತೆ. ಡಿಸಿಸಿ ಬ್ಯಾಂಕ್ ನೌಕರರು ನಮ್ಮ ಬ್ಯಾಂಕಿನ ಬೆನ್ನೆಲುಬು. ಅವರು ಕೊಟ್ಟ ಬೇಡಿಕೆಯನ್ನು ಈಗಾಗಲೇ ಈಡೇರಿಸಿದ್ದೇವೆ. ಮುಂದೆಯೂ ಈಡೇರಿಸುತ್ತೇವೆ ಎಂದರು.
ನನಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನ ಸಿಗಲು ಸಚಿವ ರಮೇಶ್ ಜಾರಕಿಹೊಳಿ ಅವರ ಪಾತ್ರವೂ ಮುಖ್ಯವಾಗಿದೆ. ನಾನು ರಾಜಕಾರಣದಲ್ಲಿ ಅವಕಾಶ ವಂಚಿತ ಎಂಬುವುದು ಅವರಿಗೆ ಗೊತ್ತಿತ್ತು. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ರಾಜ್ಯಸಭೆಗೂ ನನ್ನನ್ನು ಪರಿಗಣಿಸಲಿಲ್ಲ. ಈ ಕಾರಣಕ್ಕೆ ಡಿಸಿಸಿ ಬ್ಯಾಂಕ್ನಲ್ಲಿ ನಮ್ಮ ಹಿರಿಯರೆಲ್ಲರೂ ನನಗೆ ಅವಕಾಶ ಕರುಣಿಸಿದರು ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸುರೇಶ್ ಅಂಗಡಿ ಕುಟುಂಬಕ್ಕೆ ನೀಡುವಂತೆ ಒತ್ತಾಯಿಸಿದ್ದೇನೆ. ಒಂದು ವೇಳೆ ಅಂಗಡಿ ಕುಟುಂಬಕ್ಕೆ ನೀಡದಿದ್ದರೆ ನನಗೆ ಅವಕಾಶ ನೀಡುವಂತೆ ಕೋರುತ್ತೇನೆ. ಚಿಕ್ಕೋಡಿ ಲೋಕಸಭೆ ಟಿಕೆಟ್ ಸಿಗದೇ ನಾನು ವಂಚಿತನಾಗಿದ್ದೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿಯೂ ವಂಚಿತನಾಗಿದ್ದೇನೆ. ಹೀಗಾಗಿ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ಆಗ ನನಗೆ ಅವಕಾಶ ಕೊಡಿ ಎಂದು ಕೇಳ್ತೀನಿ ಎಂದರು.