ಬೆಳಗಾವಿ: ರಾಜಕಾರಣ ಅಂದರೇನೆ ಹಾಗೇನೆ. ಯಾವುದೇ ಚುನಾವಣೆ ಇದ್ದರೂ ಅದು ಚುನಾವಣೆಯಾಗಿ ನಡೆಯುವುದಿಲ್ಲ. ಬದಲಿಗೆ ಪ್ರತಿಷ್ಠೆಯಾಗಿರುತ್ತವೆ. ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದರೆ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
ಒಗ್ಗಟ್ಟಿನ ಮಂತ್ರ ಪಠಿಸಿದ್ದ ಬಿಜೆಪಿ ನಾಯಕರು ಇದೀಗ ಅದೊಂದು ಕ್ಷೇತ್ರದಲ್ಲಿ ತೆರೆಮರೆಯ ಆಟ ಶುರುವಿಟ್ಟುಕೊಂಡಿದ್ದಾರೆ. ಗೆಲ್ಲಲೇಬೇಕು ಅಂತಿರುವ ಬಿಜೆಪಿಗೆ ಕೈ ಶಾಸಕಿ ಅಂಜಲಿ ಶಾಕ್ ಕೊಟ್ಟಿದ್ದು, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೆಸಾರ್ಟ್ ರಾಜಕಾರಣ ಶುರುವಾಗಿದೆ.
ಜಿಲ್ಲಾ ರಾಜಕಾರಣದಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯ. ಪಕ್ಷ ಒಂದೇ ಇದ್ದರೂ ಪ್ರತಿಷ್ಠೆಯಾಗಿ ಮಾರ್ಪಡುತ್ತದೆ. ಈ ಹಿಂದೆ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯೇ ಇದಕ್ಕೆ ನಿದರ್ಶನ. ಇದೀಗ ನವೆಂಬರ್ 6ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕೂಡ ಸೇರ್ಪಡೆಯಾಗಿದ್ದು, ಸದ್ಯ ಬಿಜೆಪಿಯಲ್ಲೇ ಶುರುವಾಗಿದ್ದ ಬಣ ರಾಜಕೀಯ ಹೈಕಮಾಂಡ್ ಖಡಕ್ ಸೂಚನೆಯಿಂದ ಒಟ್ಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 16 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೇ 13 ಸ್ಥಾನಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆದರೆ, ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘ, ರಾಮದುರ್ಗ ಮತ್ತು ಕುರಿ ಉಣ್ಣೆ ನಿಗಮ ಈ ಮೂರು ಸ್ಥಾನಗಳಿಗೆ ನ.6ರಂದು ಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ಮಾತ್ರ ರಂಗು ಪಡೆದುಕೊಂಡಿದ್ದು, ಇಲ್ಲಿ ರೆಸಾರ್ಟ್ ರಾಜಕಾರಣ ಕೂಡ ಆರಂಭವಾಗಿದೆ. ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದು, ಒಂದು ಹಾಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಇನ್ನೊಂದು ಎಂಇಎಸ್ನ ಮಾಜಿ ಶಾಸಕ ಅರವಿಂದ್ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ.
ಈ ಇಬ್ಬರ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟಿರುವ ಚುನಾವಣೆ ಇದೀಗ ಗೆಲ್ಲಲೇಬೇಕು ಅಂದುಕೊಂಡು 50 ಪಿಕೆಪಿಎಸ್ ಸೊಸೈಟಿಯ ಮತದಾನ ಹಕ್ಕು ಹೊಂದಿರುವ 50 ಸದಸ್ಯರು ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ. 28 ಮತದಾರರನ್ನು ಅಂಜಲಿ ನಿಂಬಾಳ್ಕರ್ ಮಹಾರಾಷ್ಟ್ರದ ಪುಣೆಯ ಹೊರ ವಲಯದಲ್ಲಿರುವ ಆ್ಯಂಬಿವ್ಯಾಲಿ ರೆಸಾರ್ಟ್‌ಗೆ ಕಳುಹಿಸಿಕೊಟ್ಟಿದ್ದರೆ, ಇತ್ತ ಮಾಜಿ ಶಾಸಕ ಅರವಿಂದ ಪಾಟೀಲ್ 22ಜನರನ್ನು ಮಹರಾಷ್ಟ್ರದ ಸಾವಂತವಾಡಿಯಲ್ಲಿರುವ ಬೀಚ್ ರೆಸಾರ್ಟ್‌ಗೆ ಶಿಪ್ಟ್ ಮಾಡಿದ್ದಾರೆ.