ಬೆಳಗಾವಿ: ಅಕ್ಟೋಬರ್ 23, 24 ಮತ್ತು 25ರಂದು ಮೂರು ದಿನ ರಾಜ್ಯ ಮಟ್ಟದ ಕಿತ್ತೂರು ಉತ್ಸವದ ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕಲಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿವೆ. ಆಸನ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಚರಣೆ ತಯಾರಿ ಮಾಡಿಕೊಳ್ಳಲಾಗಿದೆ. ರಾಜ್ಯಾದ್ಯಂತ ಸಂಚರಿಸಿದ ವೀರರಾಣಿ ಚನ್ನಮ್ಮನ ವೀರಜ್ಯೋತಿಗೆ ಮುಖ್ಯಮಂತ್ರಿಗಳು ಬೆಂಗಳೂರು ವಿಧಾನಸೌಧದ ಆವರಣದಲ್ಲಿ ಅಕ್ಟೋಬರ್ 13 ರಂದು ಚಾಲನೆ ನೀಡಿದ್ದರು. ಪ್ರತಿ ವರ್ಷದಂತೆ ಕಿತ್ತೂರು ಕೋಟೆ ಆವರಣದಲ್ಲಿ ಅ.23 ರಿಂದ 25 ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಉತ್ಸವ ಉದ್ಘಾಟನೆ: ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣವನ್ನು ಉತ್ಸವ ಸಮಿತಿ ಅಧ್ಯಕ್ಷನಾಗಿರುವ ನಾನು ನೆರವೇರಿಸಲಿದ್ದೇನೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ವಿಜಯಜ್ಯೋತಿಗೆ ಸ್ವಾಗತ ಹಾಗೂ ಸಂಸ್ಥಾನದ ಧ್ವಜಾರೋಹಣ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು. ಜಾನಪದ ಕಲಾವಾಹಿನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡುವರು. ಫಲ-ಪುಷ್ಪ ಪ್ರದರ್ಶನಕ್ಕೆ ಸಂಸದೆ ಮಂಗಲ ಅಂಗಡಿ ಚಾಲನೆ ನೀಡುವರು. ವಸ್ತು ಪ್ರದರ್ಶನ ಮಳಿಗೆಗಳನ್ನು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಉದ್ಘಾಟಿಸುವರು. ಕ್ರೀಡೆ ಮತ್ತು ವಿಹಾರಕ್ಕೆ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಚಾಲನೆ ನೀಡಲಿದ್ದು, ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತಿ ಇರುವರು ಎಂದರು.
ಉತ್ಸವಕ್ಕೆ ₹2 ಕೋಟಿ ಅನುದಾನ:ಸರ್ಕಾರ ಈಗಾಗಲೇ ಉತ್ಸವಕ್ಕೆ 2 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಯಾವುದೇ ರೀತಿಯಲ್ಲಿ ಅನುದಾನದ ಕೊರತೆಯಾಗಿಲ್ಲ. ಕ್ರೀಡೆ, ಮನರಂಜನೆ, ವಿಚಾರ ಸಂಕೀರ್ಣ, ಫಲ ಪುಷ್ಪ ಪ್ರದರ್ಶನ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಆಯೋಜನೆಗೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.