ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಹ 155 ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಪಾಲಿಕೆಯಲ್ಲಿ ನೇರ ನೇಮಕಾತಿಯಡಿ ಖಾಲಿ ಇರುವ ಒಟ್ಟು 155 ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ ದಿನಾಂಕದ ಪೂರ್ವದಲ್ಲಿ ನಿರಂತರವಾಗಿ ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವೇತನ/ಹೊರಗುತ್ತಿಗೆ ಮೇರೆಗೆ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಸ್ವೀಕೃತ ಅರ್ಜಿಗಳನ್ನು ಪರಿಶೀಲನಾ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಸಲ್ಲಿಕೆಯಾದ ಒಟ್ಟು 468 ಅರ್ಹ ಅಭ್ಯರ್ಥಿಗಳ ಪೈಕಿ ನೇರನೇಮಕಾತಿಯಡಿ ಖಾಲಿ ಇರುವ ಹಾಗೂ ಮೀಸಲಾತಿಗನುಗುಣವಾಗಿ 155 ಅಭ್ಯರ್ಥಿಗಳನ್ನು ಖಾಯಂಗೊಳಿಸಲು ದಿನಾಂಕ: 18.11.2023ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆ ಜರುಗಿಸಿ ಅಂತಿಮಗೊಳಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಾ ಪ್ರಸ್ತುತ ನೇರ ವೇತನದಡಿ ಕೆಲಸ ನಿರ್ವಹಿಸುತ್ತಿರುವ 155 ಸದರಿ ಪೌರಕಾರ್ಮಿಕರನ್ನು ಖಾಯಂಗೊಳಿಸಲು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿ: 18-11-2023 ರಂದು ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ, ಸಂಬಂಧಿಸಿದ ಉಪವಿಭಾಗಾಧಿಕಾರಿಗಳ, ತಹಶೀಲ್ದಾರ್ ಕಾರ್ಯಾಲಯದ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಹಾಗೂ ಪಾಲಿಕೆಯ/ಡಿಯುಡಿಸಿ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.
ಈ ಪ್ರಕಟಣೆಯನ್ನು ಹೊರಡಿಸಿದ 15 ದಿನಗಳೊಳಗಾಗಿ ಅಂದರೆ ದಿನಾಂಕ: 04.12.2023 ರ ಸಾಯಂಕಾಲ 4.00 ಘಂಟೆಯೊಳಗಾಗಿ ಬಾಧಿತ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ಇವರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು: ಬೆಳಗಾವಿ ಎಸ್ಪಿ ಆದೇಶ