ಬೆಳಗಾವಿ :ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಜುಲೈ ತಿಂಗಳಲ್ಲಿ ಶೇ. 24ರಷ್ಟು ಮಳೆ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ, ಜಿಲ್ಲೆಯಲ್ಲಿ ನೆರೆ ಹಾವಳಿ ಅಪಾಯವಿಲ್ಲ. ಯಾವ ನದಿಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದ್ದಾರೆ.
ನಗರದಲ್ಲಿರುವ ಡಿಸಿ ಕಚೇರಿಯಲ್ಲಿ ಸಿಎಂ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದಿನ ಸಿಎಂ ಸಭೆಯಲ್ಲಿ ಮಳೆಯ ಪರಿಸ್ಥಿತಿ, ನೆರೆ ಹಾವಳಿ ಹಾಗೂ ಕೋವಿಡ್ ಸ್ಥಿತಿಗತಿಗಳ ಕುರಿತು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಏನಾದರೂ ಸಮಸ್ಯೆಗಳು ಇದ್ದರೂ ತಿಳಿಸುವಂತೆ ಹೇಳಿದ್ದಾರೆ. ಇದಲ್ಲದೇ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆದರು ಎಂದರು.
ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸುದ್ದಿಗೋಷ್ಠಿ ಜಿಲ್ಲೆಗೆ ಪ್ರವಾಹ ಭೀತಿ ಸೃಷ್ಟಿಸುವ ಕೋಯ್ನಾ ಡ್ಯಾಮ್‌ನಲ್ಲಿ 54 ಟಿಎಂಸಿ ನೀರು ಸಂಗ್ರಹವಿದೆ. 105 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇದೆ. ಮಹಾರಾಷ್ಟ್ರದವರು 75 ಟಿಎಂಸಿ ನೀರು ಭರ್ತಿ ಆಗುವವರೆಗೂ ನೀರು ಬಿಡುಗಡೆ ಮಾಡುವುದಿಲ್ಲ. ಹೀಗಾಗಿ, ಜಿಲ್ಲೆಗೆ ಸದ್ಯಕ್ಕೆ ನೆರೆ ಹಾವಳಿ ಭಯ ಇಲ್ಲ. ಆದರೂ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಇನ್ನು, ಕೊರೊನಾ ತಡೆಗೆ ಜಿಲ್ಲೆಯ 34 ಗಡಿಗಳಲ್ಲಿ ಕೋವಿಡ್ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕೊರೊನಾ ನೆಗಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಇದರ ಜೊತೆಗೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಜನರು ಸೇರದಂತೆ ಭಕ್ತರ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರುವ ಮೂಲಕ ಕೊರೊನಾ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ : ಮಹಾನ್ ಕಳ್ಳನ ಹಿಡಿಯಲು ರೈತರಾದ ಪೊಲೀಸರು.. ಯಾವ ಸಿನಿಮಾಗಿಂತ ಕಮ್ಮಿಯಿಲ್ಲ ಈ ಸ್ಟೋರಿ..