ಬೆಳಗಾವಿ:ರೈತರ ಸಾಲ ವಸೂಲಾತಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಒಂದು ವೇಳೆ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದರೆ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಅವರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.
ಸಂತ್ರಸ್ತರು ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಬೊಮ್ಮನಹಳ್ಳಿ ಮಾತನಾಡಿದರು. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳು ಕೂಡ ಜನರ ಪರಿಸ್ಥಿತಿ ಅರಿತುಕೊಂಡು ಕೆಲಸ ಮಾಡಬೇಕು. ಸಾಲಮನ್ನಾ ಅರ್ಹತೆ ಹೊಂದಿರುವ ರೈತರ ವಿರುದ್ಧದ ಪ್ರಕರಣಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸಬೇಕೆಂದರು.
ಸಾಲ ವಸೂಲಾತಿ ತಕ್ಷಣ ನಿಲ್ಲಿಸಲು ಬ್ಯಾಂಕುಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ ಸಾಲ ವಸೂಲಾತಿ ನೋಟಿಸ್ಗೆ ಗಾಬರಿ ಬೇಡ:
ಸಾಲ ವಸೂಲಾತಿಗೆ ಸಂಬಂಧಿಸಿದಂತೆ ನೋಟಿಸ್ ಅಥವಾ ವಾರೆಂಟ್ಗಳು ಬಂದಾಗ ಒಮ್ಮೆಲೆ ಭಯಗೊಳ್ಳುವ ಅಗತ್ಯವಿಲ್ಲ. ಅದಕ್ಕೆ ಕಾನೂನು ಪ್ರಕಾರ ರಕ್ಷಣೆಯನ್ನು ಒದಗಿಸಲಾಗುವುದು. ಇದಕ್ಕೆ ಗಾಬರಿಯಾಗದೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕಾನೂನು ನೆರವು ನೀಡಲಾಗುವುದುದೆಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜೊತೆಗೆ, ಸಾಲ ನೀಡುವಾಗ ಕೆಲವು ಖಾಸಗಿ ಬ್ಯಾಂಕುಗಳು ಖಾಲಿ ಚೆಕ್ ಪಡೆದುಕೊಳ್ಳಲು ಅವಕಾಶಗಳಿಲ್ಲ, ಮುಂದಿನ ದಿನಾಂಕಗಳನ್ನು ನಮೂದಿಸಿ ಚೆಕ್ ಪಡೆಯುವ ಪದ್ಧತಿ ಇದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಖಾಲಿ ಚೆಕ್ ಪಡೆದುಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದ್ರು. ಅಲ್ಲದೇ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ಯಾವುದೇ ರೀತಿಯ ಪಿಂಚಣಿಯನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ಸೂಚನೆ ಕೊಟ್ಟರು.
ಖಾಸಗಿ ಬ್ಯಾಂಕ್-ಏಜೆಂಟರುಗಳ ಹಾವಳಿ:
ಮಸಗುಪ್ಪಿ ಮತ್ತಿತರ ಕಡೆ ಕೆಲ ಬ್ಯಾಂಕ್ ಸಿಬ್ಬಂದಿ ಪರಿಹಾರ ಕೇಂದ್ರಗಳಿಗೆ ತೆರಳಿ ಸಾಲ ವಸೂಲಾತಿಗೆ ಮುಂದಾಗಿರುವುದು ದುರ್ದೈವದ ಸಂಗತಿ ಎಂದು ರೈತ ಮುಖಂಡ ಪ್ರಕಾಶ್ ನಾಯಕ ಬೇಸರ ವ್ಯಕ್ತಪಡಿಸಿದರು. ಕೆಲವು ಖಾಸಗಿ ಬ್ಯಾಂಕುಗಳು ಸಾಲ ವಸೂಲಾತಿಗೆ ನೇಮಿಸಿರುವ ಏಜೆಂಟರುಗಳು ಗೂಂಡಾಗಳ ರೀತಿ ವರ್ತಿಸಿ ಸಾಲ ಪಡೆದವರನ್ನು ಶೋಷಿಸಲಾಗುತ್ತಿದೆಂದು ಅವರು ದೂರಿದ್ರು. ಎಲ್ಲ ಬಗೆಯ ಸಾಲ ವಸೂಲಾತಿಯನ್ನು ತಕ್ಷಣವೇ ನಿಲ್ಲಿಸಬೇಕು, ರೈತರ ಹಾಗೂ ಗ್ರಾಮೀಣ ಜನರ ಶೋಷಣೆ ಮಾಡದೇ ಮರುಪಾವತಿಗೆ ಸೂಕ್ತ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.