ಬೆಳಗಾವಿ :ತಾಲೂಕಿನ ಮಚ್ಛೆ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುವ ಮೂಲಕ ಹೈವೇ ಕಾಮಗಾರಿಗೆ ತಡೆ ನೀಡಿದ್ದಾರೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಈ ಸಂಬಂಧ ಡಿಸಿ ಎಂ ಜಿ ಹಿರೇಮಠ ರೈತರೊಂದಿಗೆ ಸಂಧಾನ ಸಭೆ ನಡೆಸಿ ಪರಿಹಾರ ಕ್ರಮದ ಬಗ್ಗೆ ಚರ್ಚಿಸಿದರು.
ರೈತರೊಂದಿಗೆ ಸಂಧಾನ ಸಭೆ ನಡೆಸಿದ ಡಿಸಿ.. ಸಭೆಯಲ್ಲಿ ಕೃಷಿ ಜಮೀನು ಕಳೆದುಕೊಳ್ಳುವ ಅತಿ ಸಣ್ಣ ರೈತರಿಗೆ ಹೆಚ್ಚಿನ ಪರಿಹಾರ ಹಣ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ನಮ್ಮ ಕೃಷಿ ಜಮೀನುಗಳು ನಮ್ಮ ಜೀವನಕ್ಕೆ ಆಧಾರವಾಗಿವೆ. ಅವುಗಳನ್ನು ಬಿಟ್ಟು ಕೊಡುವುದಿಲ್ಲ. ನೀವು ಬೇಕಾದರೆ ಹೈವೇ ಕಾಮಗಾರಿಯನ್ನೇ ಬೇರೆಡೆ ಸ್ಥಳಾಂತರ (ಪರ್ಯಾಯ ಮಾರ್ಗ) ಮಾಡುವಂತೆ ಪಟ್ಟು ಹಿಡಿದರು.
ಅಲ್ಲದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಸುವರ್ಣಸೌಧದ ಬಳಿಯಿರುವ ಕೊಂಡುಸಕೊಪ್ಪ ಮಾರ್ಗದ ಮೂಲಕ ಹೈವೇ ಕಾಮಗಾರಿ ಆರಂಭಿಸಲು ಅಂದಿನ ಸರ್ಕಾರ ಒಪ್ಪಿಗೆ ಸೂಚಿಸಿತ್ತು.
ಕಾರಣ ಆ ಮಾರ್ಗದಲ್ಲಿ ಕಡಿಮೆ ಪ್ರಮಾಣದಲ್ಲಿ ಕೃಷಿ ಜಮೀನಿದೆ. ಹೀಗಾಗಿ, ಅದನ್ನೊಮ್ಮೆ ಪರಿಶೀಲನೆ ನಡೆಸಿ ಅದರ ಜೊತೆಗೆ ಮಚ್ಛೆ ಗ್ರಾಮದಲ್ಲಿರುವ ನಮ್ಮ ಕೃಷಿ ಜಮೀನುಗಳನ್ನು ಪರಿಶೀಲನೆ ಮಾಡಿ ಎಂದು ರೈತರು ಡಿಸಿಗೆ ಮನವಿ ಮಾಡಿದರು.
ಈ ವೇಳೆ ಡಿಸಿ ಎಂ ಜಿ ಹಿರೇಮಠ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ಮತ್ತೊಮ್ಮೆ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದೆಂದು ಭರವಸೆ ನೀಡಿದರು.
ಸಭೆಯಲ್ಲಿ ರೈತರ ಆರೋಪ :ರೈತರ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ನೋಟಿಸ್ ನೀಡಿಲ್ಲ. ಇಂಜಿನಿಯರ್ ಮನ ಬಂದಂತೆ ರೂಟ್ ಮ್ಯಾಪ್ ಹಾಕಿದ್ದಾರೆ. ಭೂ ಸ್ವಾಧೀನ ಆಗದಿರುವ ಕೆಲ ರೈತರಿಗೆ ಪರಿಹಾರ ದೊರಕಿದೆ.
ಇದರಲ್ಲಿ ಅಧಿಕಾರಿಗಳ ನೇರ ಭಾಗಿಯಾಗಿದ್ದು, ಸರ್ವೇ ನಂಬರ್ಗಳನ್ನು ಬದಲಾವಣೆ ಮಾಡಿ ಪರಿಹಾರ ಕೊಡಿಸಿದ್ದಾರೆ. ಕೆಲ ರೈತರ ಜಮೀನು ಸ್ವಾಧೀನ ಆಗದಿದ್ದರೂ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ. ಇದಲ್ಲದೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ರಾಷ್ಟ್ರೀಯ ಹೆದ್ದಾರಿ ಭೂ ನಿಗಮದವರು ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು.