ಬೆಳಗಾವಿ:ನಾಳೆ ನಡೆಯುವ ಡಿ.ಬಿ. ಇನಾಮದಾರ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದ ಮೂಲಕ ಮಾಡುವಂತೆ ಈಗಾಗಲೇ ಹೇಳಿದ್ದೇನೆ. ಈಗ ಕೆಲವೇ ಹೊತ್ತಿನಲ್ಲಿ ಆದೇಶ ಬರುವ ನಿರೀಕ್ಷೆಯಿದೆ. ಅವರ ಗೌರವಕ್ಕೆ ತಕ್ಕ ಹಾಗೆ ಅಂತ್ಯಕ್ರಿಯೆ ಆಗಬೇಕೆಂಬುದು ನಮ್ಮ ಇಚ್ಛೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಾಜಿ ಸಚಿವ ಡಿ.ಬಿ. ಇನಾಮದಾರ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿ.ಬಿ. ಇನಾಮದಾರ್ ಸರಳ ಸಜ್ಜನ ರಾಜಕಾರಣಿಯಾಗಿದ್ದರು. ಎಲ್ಲ ರಂಗಗಳಲ್ಲೂ ಪರಿಣಿತಿ ಹೊಂದಿದ್ದರು. ಪ್ರಗತಿಪರ ಚಿಂತಕರಾಗಿದ್ದರು. ದೂರದೃಷ್ಟಿ ಹೊಂದಿದ್ದರು. ಯಾವುದೇ ಖಾತೆ ಕೊಟ್ಟರು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿದ್ದಾಗ ಬಹಳ ದಕ್ಷತೆಯಿಂದ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದರು. 1984ರಲ್ಲಿ ಡಿ.ಬಿ. ಇನಾಮದಾರ್ ಅವರನ್ನು ಕರೆದು ನಮ್ಮ ತಂದೆ ಮಂತ್ರಿ ಮಾಡಿದ್ದರು. ಒಂದು ರೀತಿಯಲ್ಲಿ ನಮಗೂ ಅವರಿಗೂ ಕೌಟುಂಬಿಕ ಸಂಬಂಧವಿತ್ತು ಎಂದು ಸ್ಮರಿಸಿದರು.
ಇತ್ತೀಚಿನ ದಿನಗಳಲ್ಲಿ ಕಿತ್ತೂರಿನಲ್ಲಿ ನಾನು ಡಿ.ಬಿ. ಇನಾಮದಾರ್ ಅವರನ್ನು ಭೇಟಿಯಾಗಿ, ಅವರ ಜೊತೆಗೆ ಊಟ ಮಾಡಿದ್ದೆ. ಆ ವೇಳೆ ಹಲವಾರು ವಿಚಾರಗಳು ಚರ್ಚೆ ಆಗಿದ್ದವು. ಆದರೆ ಇಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋಗುತ್ತಾರೆ ಅಂದುಕೊಂಡಿರಲಿಲ್ಲ. ಕೋವಿಡ್ ಮತ್ತು ಹೊಸ ಕಾಯಿಲೆ ಎಚ್2ಎನ್3 ಆಗಿದ್ದು ನಿಜಕ್ಕೂ ಬಹಳ ಆಶ್ಚರ್ಯದ ಸಂಗತಿ. ಲಕ್ಷಕ್ಕೆ ಒಬ್ಬರಿಗೆ ಈ ಕಾಯಿಲೆ ಆಗುತ್ತಂತೆ. ಬಳಿಕ ನ್ಯುಮೋನಿಯಾ ಆಗಿ, ಸುಮಾರು 45 ದಿನ ಐಸಿಯುದಲ್ಲಿದ್ದು, ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ.