ಬೆಳಗಾವಿ : ಮಹಾತ್ಮಾ ಪುಲೆ ಆರೋಗ್ಯ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ನಿರ್ಣಯ ಕೈಗೊಂಡಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಕರ್ನಾಟಕ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಬೆಳಗಾವಿಯ ಜಿ.ಪಂ.ಸಭಾಭವನದಲ್ಲಿ ಇಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರ ಸರ್ಕಾರದ ನಿರ್ಣಯ ಖಂಡಿಸಿದರು.
ಕರ್ನಾಟಕದಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ. ಮರಾಠಿ ಭಾಷಿಕರನ್ನು ಪ್ರಚೋದಿಸಲು ಚಂದಗಡದಲ್ಲಿ ಕಚೇರಿ ಸ್ಥಾಪಿಸುತ್ತಿದ್ದಾರೆ. ಗಡಿ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಸಚಿವರು, ಓರ್ವ ಸಂಸದರನ್ನೂ ನೇಮಿಸಿದೆ. ಆದರೆ, ನಮ್ಮ ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರ, ಸಂರಕ್ಷಣಾ ಆಯೋಗ ಇದ್ದೂ ಇಲ್ಲದಂತಾಗಿದೆ. ಹಾಗಾಗಿ, ಈ ಎಲ್ಲ ವಿಚಾರಗಳ ಕುರಿತು ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.