ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ವೇಳೆ ನೆಲದಡಿ ಇರುವ ಗ್ಯಾಸ್ ಪೈಪ್‌ಲೈನ್‌ಗೆ ಹಾನಿ ಆದ ಪರಿಣಾಮ 20 ಲಕ್ಷ ರೂ. ಮೌಲ್ಯದ ಗ್ಯಾಸ್ ಸೋರಿಕೆ ಆದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಲೈನ್‌ಗೆ ಹಾನಿ: ತಪ್ಪಿದ ಭಾರೀ ಅನಾಹುತ ನಗರದ ಪೊಲೀಸ್ ಆಯಕ್ತರ ಕಚೇರಿ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಜೆಸಿಬಿ ಮೂಲಕ ಡ್ರೈನೇಜ್ ಕಾಮಗಾರಿ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಗ್ಯಾಸ್ ಪೈಪಲೈನ್ ಇರುವ ಕುರಿತು ಪತ್ರ ಬರೆದು ಮನವಿ ಮಾಡಿಕೊಂಡರೂ ಅಧಿಕಾರಿಗಳು ಮಾತ್ರ ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಗ್ಯಾಸ್ ಸೋರಿಕೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ನಗರದ ಪ್ರಮುಖ ಹೋಟೆಲ್ ಸೇರಿದಂತೆ ಮನೆಗಳಿಗೆ ಪಿಎನ್ಜಿ ಮೆಗಾ ಕಂಪನಿ ವತಿಯಿಂದ ಗ್ಯಾಸ್ ಸರಬರಾಜು ಆಗುತ್ತದೆ.
ಆದರೀಗ ಗ್ಯಾಸ್ ಪೈಪ್‌ಲೈನ್‌ಗೆ ಹಾನಿ ಆಗಿದ್ದರಿಂದ ಸುಮಾರು 20 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ಗ್ಯಾಸ್ ಸೋರಿಕೆ ಆಗಿದೆ. ಇದಲ್ಲದೇ ಗ್ಯಾಸ್ ಸೋರಿಕೆಯಾಗಿ ಗಾಳಿಯಲ್ಲಿ ಬೆರತು ಹರಡುತ್ತಿರುವುದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆದರೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ. ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.