ಚಿಕ್ಕೋಡಿ: ಒಂದು ತುಂಡು ಜಮೀನಿಲ್ಲದೆ 50ಕ್ಕೂ ಹೆಚ್ಚು ಎಮ್ಮೆ ಹಾಗೂ ಬಲಾಢ್ಯ ಗಜೇಂದ್ರ ಎಂಬ ಕೋಣ ಸಾಕುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ ಈ ರೈತ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ರೈತ ವಿಲಾಸ್ ನಾಯಕ್ ಹೈನುಗಾರಿಕೆಯಿಂದ ಬದುಕು ರೂಪಿಸಿಕೊಂಡಿದ್ದಾರೆ. ಇವರು ಮುರ್ರಾ, ಕರನಾಳ, ವೈಶಾನಿ ಹಾಗೂ ಜವಾರಿ ತಳಿಯ 50ಕ್ಕೂ ಹೆಚ್ಚು ಎಮ್ಮೆ ಸಾಕಿದ್ದಾರೆ. ದಿನಕ್ಕೆ 120ಕ್ಕೂ ಹೆಚ್ಚು ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ.
ಎಮ್ಮೆ ಸಾಕಿರುವ ವಿಲಾಸ್ ಅವರು ಅವುಗಳ ಗರ್ಭಧಾರಣೆಗೆ ದೈತ್ಯಾಕಾರದ ಕೋಣವನ್ನೂ ಸಾಕಿದ್ದಾರೆ. ಫೆ.20ರಂದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ತಾಸಗಾಂವದಲ್ಲಿ 61 ಲಕ್ಷ ರೂ.ಗೆ ಅಲ್ಲಿನ ಹೈನುಗಾರಿಕೆ ಉದ್ಯಮಿ ಕೇಳಿದ್ದರಂತೆ. ಆದರೆ, ವಿಲಾಸ ಅವರು ಪ್ರೀತಿಯಿಂದ ಸಾಕಿದ ಗಜೇಂದ್ರನನ್ನು ಮಾರಾಟ ಮಾಡಿಲ್ಲ.
ಯುವ ಉದ್ಯಮಿಗಳಿಗೆ ಮಾದರಿಯಾದ ರೈತ ವಿಲಾಸ್ ನಾಯಕ್.. ಗಜೇಂದ್ರ ಕೇವಲ 3 ವರ್ಷ 1 ತಿಂಗಳು ವಯಸ್ಸಿನದಾಗಿದೆ. 1,500 ಕೆಜಿ ತೂಕವಿದೆ. ದಿನಂಪ್ರತಿ 15 ಲೀಟರ್ ಹಾಲು, 5 ಕೆಜಿ ಹಿಂಡಿ, 4 ಕೆಜಿ ಹಿಟ್ಟು ಹಾಗೂ ಮೇವು ಸೇವಿಸುತ್ತದೆ. ವಿಲಾಸ್ ಅವರಿಗೆ ಪ್ರತಿ ವರ್ಷ ಗೊಬ್ಬರದಿಂದ ಸುಮಾರು ₹2 ಲಕ್ಷ ಆದಾಯ ಬರುತ್ತಿದೆ. ಯಾರಾದರೂ ಯುವ ಉದ್ಯಮಿಗಳು ಹೈನುಗಾರಿಕೆ ಮಾಡುವವರಿದ್ದರೆ ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.
-ವಿಲಾಸ್ ನಾಯಕ್ - 6361898410