ಬೆಳಗಾವಿ: ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿರುವ ಗುತ್ತಿಗೆದಾರ ಸಂತೋಷ ಪಾಟೀಲ್ ನಿವಾಸಕ್ಕಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಕುಟುಂಬಕ್ಕೆ ಕೆಪಿಸಿಸಿಯಿಂದ 11 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಪಾಪ ಆತ ಕನಸಿನ ಒಂದು ಚಿಕ್ಕ ಮನೆ ಕಟ್ಟಿದ್ದಾನೆ. ಅದಿನ್ನೂ ಗೃಹಪ್ರವೇಶ ಆಗಿಲ್ಲ. ಧೈರ್ಯವಂತ ಯುವಕ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಸಂತೋಷ ಪಾಟೀಲ್‌ಗೆ ನ್ಯಾಯ ಒದಗಿಸಿ ಕೊಡುತ್ತೇವೆಂದು ಆತನ ಕುಟುಂಬಕ್ಕೆ ಮಾತು ಕೊಟ್ಟಿದ್ದೇವೆ. ನಮ್ಮ ಹೋರಾಟ ಮುಂದುವರೆದಿದೆ ಎಂದರು.
ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ ಮಾಡಿದ ಕೆಲಸಕ್ಕೆ ಬಿಲ್ ಕೊಡಿಸುವ ಭರವಸೆ ನೀಡಿದ್ದಾರೆ. ಆ ಇಬ್ಬರೂ ಸಚಿವರನ್ನು ನಾನು ಅಭಿನಂದಿಸುತ್ತೇನೆ. ಪಕ್ಷದ ಪರವಾಗಿ 11 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಕೂಡ ವೈಯಕ್ತಿಕ 5 ಲಕ್ಷ ಪರಿಹಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.
'ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ': ಹಳೆ ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಗಲಾಟೆ ಬೇಡ ಎಂದು ನಮ್ಮ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಅವರಿಗೂ ಗಾಯಗಳಾಗಿವೆ. ಆ ಪ್ರಕರಣದಲ್ಲಿ ರಾಜಕಾರಣ ಮಾಡಲು ಹೋಗುವುದಿಲ್ಲ. ಅಲ್ಲಿನ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸಬೇಕು ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ ಗಲಭೆ : ಕಲಬುರಗಿ ಸೆಂಟ್ರಲ್ ಜೈಲಿಗೆ 103 ಬಂಧಿತ ಆರೋಪಿಗಳ ಸ್ಥಳಾಂತರ