ಬೆಳಗಾವಿ :ಅಂಗಡಿ ಮುಂಭಾಗದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ಸೈಕಲ್ಗಳನ್ನು ಕ್ಷಣಾರ್ಧದಲ್ಲಿ ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ಸತೀಶ್ ತೆರಣಿ ಬಂಧಿತ ಆರೋಪಿ. ಇತ್ತೀಚೆಗೆ ಸೈಕಲ್ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈತ, ಕದ್ದ ಸೈಕಲ್ಗಳನ್ನು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೇವಲ ಐನೂರರಿಂದ, ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ದಿನೇದಿನೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದಂತೆ ಸೈಕಲ್ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಹತ್ತಿರದಲ್ಲಿ ಮಾರುಕಟ್ಟೆಗಳಿಗೆ ತೆರಳಲು, ಬೆಳಗ್ಗೆ ವರ್ಕೌಟ್‌ಗಾಗಿ ಸಾಕಷ್ಟು ಜನ ಸೈಕಲನ್ನೇ ನೆಚ್ಚಿದ್ದಾರೆ. ಇದನ್ನು ಮನಗಂಡಿದ್ದ ಆರೋಪಿ ಹಳ್ಳಿ ಜನರನ್ನು ಟಾರ್ಗೆಟ್ ಮಾಡಿದ್ದ. ಮುಗ್ಧ ಜನರೊಂದಿಗೆ ಊಟಕ್ಕೆ ದುಡ್ಡಿಲ್ಲ, ಊರಿಗೆ ಹೋಗಬೇಕು ಅಂತಾ ಕಥೆ ಕಟ್ಟಿ, ಅವರಿಗೆ ಯಾಮಾರಿಸಿ ಕಡಿಮೆ ಹಣಕ್ಕೆ ಸೈಕಲ್ ಮಾರಾಟ ಮಾಡುತ್ತಿದ್ದ.
ಸಾಮಾನ್ಯವಾಗಿ ಸೈಕಲ್ಗಳ ಕಳ್ಳತನವಾದ್ರೆ ಪೊಲೀಸರಿಗೆ ಬಂದು ದೂರು ಕೊಡುವವರ ಸಂಖ್ಯೆಯೂ ಕಡಿಮೆ. ಹೀಗಾಗಿ, ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ ಸತೀಶ್, ನಿತ್ಯವೂ ಒಂದೆರಡು ಸೈಕಲ್ ಕಳ್ಳತನ ಮಾಡುತ್ತಿದ್ದನಂತೆ. ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಸೈಕಲ್ ಕಳ್ಳತನದ ಕುರಿತು ಒಂದು ಕೇಸ್ ದಾಖಲಾಗಿತ್ತು.