ಬೆಳಗಾವಿ: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುವುದಾಗಿ ದಾಖಲೆ ಪಡೆದು ಒಂದೇ ಖಾತೆಯಿಂದ 102 ಬಾರಿ ಒಟಿಪಿ ಪಡೆದು ಬರೋಬ್ಬರಿ 10 ಲಕ್ಷ ರೂ. ವರ್ಗಾಯಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದ ನಿವಾಸಿ ಯಲ್ಲಪ್ಪ ನಾರಾಯಣ ಜಾಧವ್ ವಂಚನೆಗೆ ಒಳಗಾದವರು.
ಯಲ್ಲಪ್ಪ ನಾರಾಯಣ ಜಾಧವ್, ವಂಚನೆಗೆ ಒಳಗಾದವರು ವಂಚನೆ ಮಾಡಿರುವ ಖದೀಮರು ಇತ್ತೀಚೆಗೆ 09339281627 ಸಂಖ್ಯೆಯಿಂದ ಯಲ್ಲಪ್ಪ ಅವರಿಗೆ ಕರೆ ಮಾಡಿ ನಿಮ್ಮ ಎಸ್‌ಬಿಐ ಬ್ಯಾಂಕ್ ಖಾತೆಗೆ ಕೆವೈಸಿ ಅಪ್ಡೇಟ್ ಮಾಡಬೇಕಿದೆ. ಅದಕ್ಕಾಗಿ ನೀವು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಝೆರಾಕ್ಸ್ ಪ್ರತಿಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿ ಎಂದು ತಿಳಿಸಿದ್ದಾರೆ.
ಬಳಿಕ ಯಲ್ಲಪ್ಪ ಅವರ ವಾಟ್ಸ್ಆ್ಯಪ್ಗೆ ಲಿಂಕ್ವೊಂದನ್ನು ಕಳುಹಿಸಿ ಅದನ್ನು ಕ್ಲಿಕ್ ಮಾಡಿಸಿ ಬಂದ ಒಟಿಪಿ ನಂಬರ್ ಪಡೆದುಕೊಳ್ಳುತ್ತಾರೆ. ಬಳಿಕ ಹಂತ ಹಂತವಾಗಿ 102 ಬಾರಿ ಒಟಿಪಿ ಪಡೆದು ಆತನ ಬ್ಯಾಂಕ್ ಖಾತೆಯಿಂದ ಒಟ್ಟು 10 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಕರಣ ಸಂಬಂಧ ಮಾತನಾಡಿದ ಡಿಸಿಪಿ ಡಾ. ವಿಕ್ರಮ ಆಮಟೆ, ಒಟಿಪಿ ಶೇರ್ ಮಾಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಇಂತಹ ಪ್ರಕರಣದಲ್ಲಿ ಶಿಕ್ಷಣವಂತರೇ ಖದೀಮರಿಂದ ವಂಚನೆಗೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.
102 ಬಾರಿ ಒಟಿಪಿ ಶೇರ್ ಮಾಡಿರುವುದು ವಿಚಿತ್ರ ಘಟನೆ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ಮಾಹಿತಿ ನೀಡಿದರು.