ಬೆಳಗಾವಿ :ಕರ್ನಾಟಕದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಎಷ್ಟು ಹತ್ಯೆ ಆಗಿವೆ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯನವರು ಮೊದಲು ಹತ್ಯೆಯಾಗಿರುವ ಪಟ್ಟಿ ನೀಡಲಿ. ಗೋ ಹತ್ಯೆ ಮಾಡುವವರ ಪರವಾಗಿ ಇದ್ದು ಅಧಿಕಾರ ಸಿಕ್ಕಾಗ ಒಂದು, ಅಧಿಕಾರ ಇಲ್ಲದಿದ್ದಾಗ ಒಂದು ರೀತಿ ಮಾತಾಡುತ್ತಾ ಗೋಮುಖ ವ್ತಾಘ್ರ ಆಗಬಾರದು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದಮೇಲೆ ಗೋ ರಕ್ಷಣೆ ಹೆಸರಿನಲ್ಲಿ ಹತ್ಯೆಗಳು ನಡೆಯುತ್ತಿವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಎಷ್ಟು ಗೋ ರಕ್ಷಣೆ ಹೆಸರಿನಲ್ಲಿ ಹತ್ಯೆ ನಡೆದಿದೆ ಎಂದು ಸಿದ್ದರಾಮಯ್ಯ ಪಟ್ಟಿ ನೀಡಲಿ. ದೇಶದಲ್ಲಿ ಎಲ್ಲೊ ಒಂದೆರಡು ಘಟನೆ ನಡೆದಿದ್ದರು ಅದನ್ನು ನರೇಂದ್ರ ಮೋದಿ ವಿರೋಧಿಸಿದ್ದಾರೆ. ಹಾಗಂತ ನಾವು ಗೋ ಹತ್ಯೆ ಮಾಡುವವರ ಪರವಾಗಿ ಎಂದಿಗೂ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರು ಸಗಣಿ ಬಾಚಿದ್ದಾರೆ, ನಾನೂ ಸಹ ಸಗಣಿ ಬಾಚಿದ್ದೇನೆ ಆದರೆ ಅವರ ಮನಸ್ಸು ಗೋಹತ್ಯೆ ಮಾಡುವವರ ಪರವಾಗಿದೆ. ನನ್ನ ಮನಸ್ಸು ಗೋ ರಕ್ಷಣೆ ಮಾಡುವ ಕಡೆಗಿದೆ. ಇಷ್ಟೇ ವ್ಯತ್ಯಾಸ ಎಂದು ಸಿದ್ದರಾಮಯ್ಯಗೆ ಕಿಚಾಯಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಪ್ರವಾಹ ಪರಿಹಾರ ನೀಡಿದೆ. ಪ್ರವಾಹದಲ್ಲಿ ಉಂಟಾದ ಹಾನಿಯ ಬಗ್ಗೆ ಮಾಹಿತಿ ಕೇಂದ್ರಕ್ಕೆ ತಲುಪಿಸಿದ್ದು ಮತ್ತಷ್ಟು ಪರಿಹಾರವನ್ನು ಕೇಂದ್ರ ಸರ್ಕಾರ ನೀಡಲಿದೆ. ನರೇಂದ್ರ ಮೋದಿ ಕರ್ನಾಟಕಕ್ಕೆ ಮೋಸ ಮಾಡಿಲ್ಲ. ಮೋಸ ಮಾಡುವವರು ಮಾತ್ರ ಅನುಮಾನದಿಂದ ನೋಡುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ನರೇಂದ್ರ ಮೋದಿಯವರ ಮುಂದೆ ಮಾತನಾಡಲು ಸಿಎಂಗೆ ದೈರ್ಯವಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಮಾಧ್ಯಮದ ಮುಂದೆ ಮಾತನಾಡುವ ಸಿದ್ದರಾಮಯ್ಯನಾಗಲಿ ಅಥವಾ ನಾನಾಗಲಿ ದೈರ್ಯವಂತರಲ್ಲ, ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಿಲ್ಲುವ ಯೋಧರು ದೈರ್ಯವಂತರು ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಮಾತಿಗೆ ತಿರುಗೇಟು ನೀಡಿದ್ದಾರೆ.