ಬೆಳಗಾವಿ/ಪಣಜಿ: ಗೋವಾದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಹೀಗಾಗಿ ಸರ್ಕಾರ ರಚನೆ ಸಂಬಂಧ ಬಿಜೆಪಿ ನಾಯಕರು ಇಂದು ಸಂಜೆ 6 ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ಗೋವಾದ ಪಣಜಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯಪಾಲರ ಭೇಟಿಗೂ ಮುನ್ನವೇ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತಾಣವಾಡೆ ನೇತೃತ್ವದಲ್ಲಿ ಪಣಜಿಯ ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆಸುತ್ತೇವೆ. ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ್, ಎಲ್. ಮುರಗನ್, ದೇವೇಂದ್ರ ಫಡ್ನವಿಸ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಗೋವಾ ಮುಂದಿನ ನಾಯಕನ ಆಯ್ಕೆ ನಡೆಯಲಿದೆ. ಸಭೆ ಬಳಿಕ ಸಂಜೆ 6 ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಸರ್ಕಾರ ರಚನೆಗಾಗಿ ಹಕ್ಕೊತ್ತಾಯ ಮಂಡಿಸುತ್ತೇವೆ. ಬಳಿಕ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರದ ದಿನಾಂಕ ನಿಗದಿಯಾಗಲಿದೆ ಎಂದು ವಿವರಿಸಿದರು.