ಬೆಳಗಾವಿ:ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿತ್ತು. ಈಗ ಆ ಎಟಿಎಂ ಬಂದ್ ಆಗಿದ್ದಕ್ಕೆ ಕಾಂಗ್ರೆಸ್ ವಿಲವಿಲ ಎಂದು ಒದ್ದಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಈ ಹಿಂದಿಗಿಂತ ಒಳ್ಳೆಯ ವಾತಾವರಣ ಇದೆ. ತಮಿಳುನಾಡು, ಪುದುಚೇರಿಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಕೇರಳದಲ್ಲಿ ಮೆಟ್ರೋಮ್ಯಾನ್ ಶ್ರೀಧರನ್ ನೇತೃತ್ವದಲ್ಲಿ ಉತ್ತಮ ವಾತಾವರಣವಿದೆ. ಪಶ್ಚಿಮ ಬಂಗಾಳದಲ್ಲಿ ದೀದಿಗೆ ಟಾಟಾ ಹೇಳಲು ಜನ ಶುರು ಮಾಡಿದ್ದು, ಕ್ಲೀನ್ ಸ್ವೀಪ್ ಮಾಡುತ್ತೇವೆ ಎಂದರು.
ಜನವಿರೋಧಿ ಬಿಜೆಪಿ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದವರ ದೃಷ್ಟಿಯಲ್ಲಿ ಎಲ್ಲರೂ ಭ್ರಷ್ಟಾಚಾರ ಮಾಡಬೇಕು. ಎಲ್ಲಾ ಹಗರಣಗಳು ಕಾಂಗ್ರೆಸ್ ಸರ್ಕಾರ ಕಾಲದಲ್ಲೇ ನಡೆದಿವೆ. ಅವರಿಗೆ ಹಗರಣ ಮಾಡಿದರಷ್ಟೇ ಸರ್ಕಾರ ಅಸ್ತಿತ್ವದಲ್ಲಿದೆ ಅನಿಸುತ್ತದೆ. ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದಲ್ಲಿ ಎಟಿಎಂ ತೆರೆದಿದ್ದದರು. ಆ ಎಟಿಎಂ ಬಂದ್ ಆಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಒದ್ದಾಡುತ್ತಿದೆ. ರಾಜ್ಯದ ಹಣ ಕೊಳ್ಳೆ ಹೊಡೆದು ಎಟಿಎಂ ಮೂಲಕ ಕಾಂಗ್ರೆಸ್ ಕಳುಹಿಸಿಕೊಡುತ್ತಿದ್ದರು. ಕಾಂಗ್ರೆಸ್ ಪಾಲಿಗೆ ಒಂದು ಕಾಲದಲ್ಲಿ ಎಟಿಎಂ ಆಗಿದ್ದ ಕರ್ನಾಟಕದಲ್ಲಿ ಬಂದ್ ಆಗಿದ್ದರಿಂದ ಬಾಯಿ ಬಡೆದುಕೊಳ್ಳುತ್ತಿದ್ದಾರೆ.