ಚಿಕ್ಕೋಡಿ : ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಜೂನ್ ಮೊದಲನೇ ವಾರದಲ್ಲಿ ಪ್ರಾರಂಭವಾಗಿ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು. ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲೇ ಸಾಗಿದ್ದವು. ಅಲ್ಪ ಸ್ವಲ್ಪ ಮಳೆಯಲ್ಲೇ ಬೀಜ ಬಿತ್ತಿದ್ದ ರೈತರಿಗೆ ಆಘಾತವಾಗಿದೆ. ಮಳೆ ಕೈಕೊಟ್ಟ ಪರಿಣಾಮ, ಬಿತ್ತನೆ ಮಾಡಿರುವ ಬೀಜಗಳು ಮೊಳಕೆಯಲ್ಲಿ ಒಣಗುತ್ತಿರುವ ಹಿನ್ನೆಲೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಶೇಕಡಾ 60 ರಷ್ಟು ರೈತರು, ಉದ್ದು, ಹತ್ತಿ, ಕಬ್ಬು, ಅರಿಶಿಣ, ಮೆಕ್ಕೆಜೋಳ, ಸಿರಿಧಾನ್ಯ, ಹಲವು ಬೆಳೆಗಳ ಬಿತ್ತನೆ ಕಾರ್ಯವನ್ನು ಮುಗಿಸಿದ್ದರು. ವಾಡಿಕೆಯಂತೆ ಶ್ರಾವಣ ಮಾಸದಲ್ಲಿ ಮಳೆ ಸುರಿದು ಬಿತ್ತನೆ ಮಾಡಿರುವ ಬೆಳೆಗಳು ರೈತರಿಗೆ ಆದಾಯದ ವರದಾನವಾಗಿ ಬರುತ್ತಿದ್ದವು. ಆದರೆ, ಈವರೆಗೆ ಮಳೆ ಅಭಾವ ಆಗಿರುವುದರಿಂದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬೆಳೆಗಳು ರೈತನ ಕಣ್ಮುಂದೆಯೇ ಒಣಗುತ್ತಿವೆ. ಬಿತ್ತನೆ ಕಾರ್ಯಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ ಎಂದು ಅನ್ನದಾತರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.