ಚಿಕ್ಕೋಡಿ :ಆಹಾರ ಅರಸಿ ಬಂದ ಮೊಸಳೆಯೊಂದು ಬಾವಿಯಲ್ಲಿ ಸೇರಿಕೊಂಡಿದೆ. ಕಳೆದ ಎರಡ್ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿಯಲು ಹರಸಾಹಸ ಪಡುತ್ತಿದ್ದರೂ ಕೂಡ ತಪ್ಪಿಸಿಕೊಳ್ಳುತ್ತಿದೆ.
ಬಾವಿಯಲ್ಲಿ ಸೇರಿಕೊಂಡ ಮೊಸಳೆ.. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ರೈತ ರಾವಸಾಹೇಬ ಮಗದುಮ್ಮ ಎಂಬುವರ ಹೊಲದ ಬಾವಿಯಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಮೊಸಳೆ ಕಾಣಿಸಿಕೊಂಡಿದ್ದು, ಊರಿನ ಜನರಲ್ಲಿ ಭಯ ಹುಟ್ಟಿಸಿದೆ.
ಮೊಸಳೆ ಕಂಡ ರೈತರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯಲ್ಲಿರುವ ಬೃಹತ್ ಗಾತ್ರದ ಮೊಸಳೆಯನ್ನ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ. ಆದರೆ, ಚಾಲಾಕಿ ಮೊಸಳೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳದೆ ತಪ್ಪಿಸಿಕೊಂಡು ಬಾವಿಯಲ್ಲಿ ಅವಿತು ಕುಳಿತಿದೆ.
ಮೊಸಳೆ ಸೆರೆ ಸಿಗದೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಆದಷ್ಟು ಬೇಗ ಮೊಸಳೆ ಸೆರೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಬಾವಿಯಲ್ಲಿ ನೀರು ಹಾಗೂ ಕೆಸರು ಇರುವುದರಿಂದ ಮೊಸಳೆ ಹಿಡಿಯುವುದು ಕಷ್ಟವಾಗುತ್ತಿದೆ. ಮೊದಲ ದಿನ ಪ್ರಯತ್ನ ವಿಫಲವಾಗಿದ್ದು, ಸದ್ಯ ಬಾವಿಯ ಸುತ್ತ ಬಲೆ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ.