ಕುಡಿತದಿಂದ ಕೌಟುಂಬಿಕ ಕಲಹ.. ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ- ಸಂಬಂಧಿಕರ ಮಾಹಿತಿ ಚಿಕ್ಕೋಡಿ (ಬೆಳಗಾವಿ) :ಪತಿಯೋರ್ವಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿಯ ಉಪ್ಪರವಾಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಉಪ್ಪರವಾಡಿ ಗಲ್ಲಿಯ ಉಷಾ ಖೋತ (29) ಎಂದು ಗುರುತಿಸಲಾಗಿದೆ. ಪತಿ ಧರೆಪ್ಪ ಖೋತ ಕೊಲೆಗೈದ ಆರೋಪಿ.
ಮೃತ ಉಷಾ ಮನೆಯ ಕೊಠಡಿಯಲ್ಲಿ ಮಲಗಿದ್ದಾಗ ಪತಿ ಧರೆಪ್ಪ ಖೋತಾ ಚಾಕುವಿನಿಂದ ಕತ್ತಿಗೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನು ಕೂಡ ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಕುಡಿತದ ಚಟದಿಂದ ನಿತ್ಯ ನಡೆಯುತ್ತಿತ್ತು ಜಗಳ.. ಧರೆಪ್ಪ ಹಾಗೂ ಪತ್ನಿ ಉಷಾ ಮದುವೆಯಾಗಿ 11 ವರ್ಷವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ದರು. ಅಲ್ಲದೆ ಧರೆಪ್ಪ ಒಂದು ಎಕರೆ ಪ್ರದೇಶದಲ್ಲಿ ರೇಷ್ಮೆ ಬೇಸಾಯ ಮಾಡುತ್ತಿದ್ದ. ಬಳಿಕ ಪತಿ ಕುಡಿತದ ಚಟಕ್ಕೆ ದಾಸನಾಗಿದ್ದ. ಇದರಿಂದ ಬೇಸತ್ತ ಪತ್ನಿ ಉಷಾ ಸಾಕಷ್ಟು ಬಾರಿ ಕುಡಿತ ನಿಲ್ಲಿಸುವಂತೆ ಒತ್ತಾಯಿಸಿದ್ದಳು. ಅಲ್ಲದೆ ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೇ ಗಲಾಟೆ ನಡೆಯುತ್ತಿತ್ತು. ಆದರೆ ಇದಕ್ಕೆ ಧರೆಪ್ಪ ಮಾತ್ರ ಇದಕ್ಕೆ ಕ್ಯಾರೇ ಅನ್ನುತ್ತಿರಲಿಲ್ಲವಂತೆ.
ಬುಧವಾರ ಮತ್ತೆ ಧರೆಪ್ಪ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಉಷಾ ಗಂಡನನ್ನು ಪ್ರಶ್ನಿಸಿದ್ದಾಳೆ. ಈ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ 8 ವರ್ಷದ ಪುಟ್ಟ ಮಗಳು ಅಲ್ಲೇ ಇದ್ದಳು. ಮಗಳ ಮುಂದೆಯೇ ಇಬ್ಬರೂ ವಾಗ್ವಾದ ನಡೆಸಿದ್ದಾರೆ. ಬಳಿಕ ಇಬ್ಬರ ಜಗಳ ತಣ್ಣಗಾಗಿ ಉಷಾ ತನ್ನ ಮಗಳನ್ನು ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಮಲಗಿದ್ದಳು. ಇನ್ನು, ಕುಡಿತದ ಅಮಲಿನಲ್ಲಿದ್ದ ಧರೆಪ್ಪ ಮನೆಯ ಕೊಠಡಿಯಲ್ಲಿ ಮಲಗಿದ್ದ ಉಷಾಳ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಆತನಿಗೆ ಪಾಪಪ್ರಜ್ಞೆ ಕಾಡಿದ್ದು, ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಮೃತಳ ಸಂಬಂಧಿ ಬಾಬುರಾಮ, ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಬಗ್ಗೆ ಸಂಧಾನವನ್ನು ನಡೆಸಲಾಗಿತ್ತು. ಆದರೆ ಇದೀಗ ಧರೆಪ್ಪ ಪತ್ನಿಯನ್ನು ಕೊಲೆ ಮಾಡಿದ್ದಾನೆ. ದಂಪತಿಗೆ ಮದುವೆಯಾಗಿ 11 ವರ್ಷ ಆಗಿತ್ತು. ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದರು.
ಮೃತರ ಸಂಬಂಧಿ ಮಿಥುನ್ ಮಂಜೆ ಪ್ರತಿಕ್ರಿಯಿಸಿ, ಮೃತ ಉಷಾ ಅವರನ್ನು ಚಿಂಚಲಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದೆವು. ಗಂಡ ಹೆಂಡತಿ ಇಬ್ಬರು ಚೆನ್ನಾಗಿದ್ದರು. ಇದೀಗ ಧರೆಪ್ಪ ಉಷಾಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಲೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಗಂಡನ ಮನೆಯವರ ಕಡೆಯಿಂದ ಸ್ವಲ್ಪ ಕಿರಿಕಿರಿ ಇತ್ತು. ಅಲ್ಲದೇ ಈ ಸಂಬಂಧ ಇಬ್ಬರು ದೂರವಾಗಿದ್ದರು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ಬೆಳಗಾವಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಸೊಸೆಯನ್ನೇ ಕೊಂದ ಕುಟುಂಬಸ್ಥರು!