ಬೆಳಗಾವಿ: ಇಲ್ಲಿನ ಹೊಸೂರ ಬಸವನ ಗಲ್ಲಿಯಲ್ಲಿ ಭಾನುವಾರ ಯುವಕನನ್ನು ಹತ್ಯೆ ಮಾಡಲಾಗಿದೆ. ಮಿಲಿಂದ ಚಂದ್ರಕಾಂತ ಜಾಧವ (28) ಕೊಲೆಯಾದ ಯುವಕ. ಈತ ಕೂಲಿ ಕೆಲಸ ಮಾಡುತ್ತಿದ್ದ. ಆಸ್ತಿ ವಿಚಾರವಾಗಿ ಸಂಬಂಧಿಯೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಅಭಿಜಿತ್ ಜಾಧವ ಆರೋಪಿಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನೀರಿನಲ್ಲಿ ಮುಳುಗಿ ಬಾಲಕ ಸಾವು: ಈಜಲು ಹೋದ ಬಾಲಕನ ತಲೆಗೆ ಕಲ್ಲು ಬಡಿದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಬೈಲಹೊಂಗಲ ತಾಲೂಕಿನ ಸಿದ್ದನಭಾವಿ ಕೊಳ್ಳದಲ್ಲಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಮಾಸ್ತಮರ್ಡಿ ಗ್ರಾಮದ ಬಾಲಕ ಕೃಷ್ಣ ಬಸವರಾಜ ಹಣಬರ (16) ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಮರಕಟ್ಟಿ ಕ್ರಾಸ್ ಹತ್ತಿರದ ಸಿದ್ದನಭಾವಿ ಕೊಳ್ಳದಲ್ಲಿ ಈಜಲು ಹೋಗಿದ್ದಾನೆ. ಈ ವೇಳೆ ತಲೆಗೆ ಕಲ್ಲು ಬಡಿದು ತೀವ್ರವಾಗಿ ಗಾಯಗೊಂಡಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾಲಕ್ಷ್ಮೀ ಲೇಔಟ್ನಲ್ಲಿ ವೃದ್ದೆ ಕೊಲೆ ಪ್ರಕರಣ: ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ನಾಗಪುರದಲ್ಲಿ ನಡೆದಿದ್ದ ವೃದ್ಧೆ ಕೊಲೆ ಪ್ರಕರಣದ ಸಂಬಂಧ ಆರೋಪಿಗಳ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಮಲಮ್ಮ ಎಂಬುವರನ್ನು ಆರೋಪಿಗಳು ಶನಿವಾರ ರಾತ್ರಿ ಕೈ, ಕಾಲು ಕಟ್ಟಿ ಹಾಕಿ ಹತ್ಯೆಗೈದು ಮೈಮೇಲಿದ್ದ ಹಾಗು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.