ಬೆಳಗಾವಿ: ಇಲ್ಲಿನ ಶಿವಬಸವ ನಗರದಲ್ಲಿ ಆ.30ರಂದು ರಾತ್ರಿ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಾಳಮಾರುತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ರಾಜಾರಾಮಪುರಿ ಬಾಯಪಾಸ್ ಚಾಳ ಗಲ್ಲಿಯ ಪ್ರಥಮೇಶ ಧರ್ಮೇಂದ್ರ ಕಸಬೇಕರ್ (20) ಹಾಗೂ ಆಕಾಶ ಕಾಡಪ್ಪಾ ಪವಾರ್(21) ಬಂಧಿತ ಆರೋಪಿಗಳು.
ಆ.30ರ ರಾತ್ರಿ ಶಿವಬಸವ ನಗರದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ನಾಗರಾಜ ಈರಪ್ಪ ಗಾಡಿವಡ್ಡರ್ (26) ಎಂಬ ಯುವಕನನ್ನು ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಮೂವರಲ್ಲಿ ಓರ್ವ ಆರೋಪಿ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಅವರು ತಂಡ ರಚಿಸಿದ್ದರು.
ಡಿಸಿಪಿ ಹೆಚ್ ಟಿ ಶೇಖರ ಅವರ ಮಾರ್ಗದರ್ಶನದಲ್ಲಿ ಮಾರ್ಕೆಟ್ ಉಪ ವಿಭಾಗದ ಎಸಿಪಿ ನಾರಾಯಣ ಭರಮನಿ, ಮಾಳ ಮಾರುತಿ ಠಾಣೆಯ ಪಿಐ ಜೆ.ಎಂ. ಕಾಲಿಮಿರ್ಚಿ ಅವರ ನೇತೃತ್ವದ ತಂಡ ಸಿಸಿ ಟಿವಿ ದೃಶ್ಯಾವಳಿ ಮತ್ತು ಇತರ ಮಹತ್ವದ ಸುಳಿವುಗಳ ಆಧಾರದ ಮೇಲೆ ಪ್ರಕರಣ ಕೈಗೆತ್ತಿಕೊಂಡು ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತೇವೆಂದು ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ತಿಳಿಸಿದ್ದಾರೆ.
ಕೊಲೆಗೆ ಪ್ರೇಮ ಪ್ರಕರಣ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಕೊಲೆಯ ಪ್ರಮುಖ ಆರೋಪಿ ನಿಪ್ಪಾಣಿ ಮೂಲದವನಾಗಿದ್ದು ಈತ ಒಂದೂವರೆ ಲಕ್ಷ ರೂ. ನೀಡುವ ಆಮಿಷ ತೋರಿಸಿ ಆರೋಪಿಗಳಿಂದ ನಾಗರಾಜನ ಕೊಲೆ ಮಾಡಿಸಿದ್ದಾನೆ. ಯುವತಿಯೊಬ್ಬಳ ಪ್ರೀತಿಯ ವಿಚಾರದಲ್ಲಿ ನಾಗರಾಜ ಮತ್ತು ಪ್ರಮುಖ ಆರೋಪಿಯ ನಡುವೆ ಶತ್ರುತ್ವ ಬೆಳೆದಿತ್ತು. ಇದೇ ಕೊಲೆಗೆ ಕಾರಣ ಎಂದು ಮಾಹಿತಿ ಲಭ್ಯವಾಗಿದ್ದು, ಪ್ರಮುಖ ಆರೋಪಿ ಬಂಧನ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ.. ಸಿಸಿಟಿವಿಯಲ್ಲಿ ಕೃತ್ಯ ಸೆರೆ