ಕರ್ನಾಟಕ

karnataka

ಬೆಳಗಾವಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಅಂತ್ಯಕ್ರಿಯೆ; ಕುಟುಂಬಸ್ಥರಿಗೆ ಗ್ರಾಮಸ್ಥರ ಸಾಥ್

By

Published : Jun 26, 2022, 10:06 PM IST

ಕೂಲಿಗಾಗಿ ಕ್ರೂಸರ್ ವಾಹನದಲ್ಲಿ ಕಾರ್ಮಿಕರು ಬರುವಾಗ ಬೆಳಗಾವಿ ತಾಲೂಕಿನ ಕಳ್ಳಾಳ್ ಬಳಿ ಭಾನುವಾರ ಬೆಳಗ್ಗೆ ಅಪಘಾತ ಸಂಭವಿಸಿ ಮೃತಪಟ್ಟಿದ್ದ 7ಮಂದಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರಸ್ತೆ ಅಪಘಾತದಲ್ಲಿ ಮೃತರಾದ ಕಾರ್ಮಿಕರ ಅಂತ್ಯಕ್ರಿಯೆ
ರಸ್ತೆ ಅಪಘಾತದಲ್ಲಿ ಮೃತರಾದ ಕಾರ್ಮಿಕರ ಅಂತ್ಯಕ್ರಿಯೆ

ಬೆಳಗಾವಿ: ಕೂಲಿ ಕೆಲಸಕ್ಕೆಂದು ಹೊರಟಿದ್ದ ವಾಹನ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಏಳು ಜನ ಕಾರ್ಮಿಕರು ಮೃತಪಟ್ಟ ಘಟನೆ ತಾಲೂಕಿನ ಕಳ್ಳಾಳ್​ನಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿತ್ತು. ಮೃತರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದು, ಈ ವೇಳೆ ಗ್ರಾಮಸ್ಥರು ಅವರಿಗೆ ನೆರವಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರು

ಕೂಲಿಗಾಗಿ ಕ್ರೂಸರ್ ವಾಹನದಲ್ಲಿ ಕಾರ್ಮಿಕರು ಬರುವಾಗ ತಾಲೂಕಿನ ಕಳ್ಳಾಳ್ ಬಳಿ ಈ ಅವಘಡ ಸಂಭವಿಸಿದೆ. ಈ ವೇಳೆ ಮೃತಪಟ್ಟ ಏಳು ಜನರಲ್ಲಿ ನಾಲ್ವರು ಅಕ್ಕತಂಗೇರಹಾಳ, ಇಬ್ಬರು ದಾಸನಟ್ಟಿ ಹಾಗೂ ಇನ್ನೊಬ್ಬರು ಮಲ್ಲಾಪುರ ಎಸ್.ಎ ಗ್ರಾಮದವರು ಎಂದು ತಿಳಿದುಬಂದಿದೆ.

ಮೃತರ ಗುರುತು ಪತ್ತೆ: ಅಕ್ಕತಂಗೇರಹಾಳ ಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮಣ್ಣವರ (51), ಆಕಾಶ ಗಸ್ತಿ (22), ದಾಸನಟ್ಟಿ ಗ್ರಾಮದ ಫಕ್ಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30), ಮಲ್ಲಾಪುರ(ಎಸ್‌.ಎ) ಗ್ರಾಮದ ಬಸವರಾಜ ಸನದಿ (35) ಮೃತರು. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂರು ಗ್ರಾಮಗಳ 40ಕ್ಕೂ ಹೆಚ್ಚು ಕಾರ್ಮಿಕರು ಮೂರು ಕ್ರೂಸರ್ ವಾಹನಗಳಲ್ಲಿ ಭಾನುವಾರ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದರು. ಕೆಲಸಕ್ಕೆ ತಡವಾಗುತ್ತದೆ ಎಂಬ ಕಾರಣಕ್ಕೆ ವಾಹನ ಚಾಲಕರು ವೇಗವಾಗಿ ಓಡಿಸುತ್ತಿದ್ದರು. ಹಿಂದಿನ ಕ್ರೂಸರ್ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆಯಿತು. ಆ ಕ್ಷಣದಲ್ಲಿ ಚಾಲಕ ಹೊರಜಿಗಿದು ಪ್ರಾಣ ಉಳಿಸಿಕೊಂಡ. ಚಾಲಕನಿಲ್ಲದೇ ನುಗ್ಗಿದ ವಾಹನ ಎರಡುಬಾರಿ ಪಲ್ಟಿಯಾಯಿತು. ಇದನ್ನು ಕಂಡು ಮುಂದಿನ ವಾಹನಗಳಲ್ಲಿದ್ದವರು ವಾಹನ ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಇದೇ ಮಾರ್ಗದಲ್ಲಿ ಹೊರಟಿದ್ದ ಇತರ ವಾಹನಗಳ ಪ್ರಯಾಣಿಕರೂ ನೆರವಿಗೆ ಧಾವಿಸಿದರು. ಪಲ್ಟಿ ಹೊಡೆದ ವಾಹನ ಕಾರ್ಮಿಕರ ಮೇಲೆಯೇ ಬಿದ್ದಿದ್ದರಿಂದ ಕೆಲ ಕ್ಷಣಗಳಲ್ಲಿ ಏಳು ಜನ ಪ್ರಾಣತೆತ್ತರು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರು

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುವವರು, ಪ್ರಾಣಬಿಟ್ಟವರನ್ನು ಜನ ಎತ್ತಿಕೊಂಡು ರಸ್ತೆ ಬದಿ ತಂದರು. ಕುಟುಂಬದವರು ಜೊತೆಗೆ ಕೆಲಸಕ್ಕೆ ಬಂದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಜಿಲ್ಲಾಸ್ಪತ್ರೆಯ ಅಧಿಕಾರಿಗಳು ತಕ್ಷಣಕ್ಕೆ 15 ಆ್ಯಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದರು.

ಮೊದಲ ದಿನ ಕೆಲಸಕ್ಕೆ ಹೊರಟಿದ್ದ ಕಾರ್ಮಿಕ ಮೃತ:ಶವಗಳ ಸಮೇತ ಎಲ್ಲರನ್ನೂ ಹೊತ್ತು ಬೆಳಗಾವಿಯತ್ತ ಧಾವಿಸಿದರು. ಬೆಳಗಾವಿ ನಗರ ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ, ಆರ್.ಟಿ.ಒ ಶಿವಾನಂದ ಮಗದುಮ್ ಸ್ಥಳದಲ್ಲಿದ್ದು ಜನ - ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೊದಲ ದಿನ ಕೆಲಸಕ್ಕೆ ಹೊರಟಿದ್ದ ಕಾರ್ಮಿಕ ಅಪಘಾತದಲ್ಲಿ ಮೃತನಾಗಿದ್ದಾನೆ. ಬಸವರಾಜ್ ದಳವಿ (30) ಎಂದು ಗುರುತಿಸಲಾಗಿದೆ. ಬಸವರಾಜ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಓದಿ:ಆರ್​ಎಸ್​​ಎಸ್​ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್​ ಹೋಗ್ತಿದೆ: ಕುಮಾರಸ್ವಾಮಿ

ABOUT THE AUTHOR

...view details