ಕರ್ನಾಟಕ

karnataka

ETV Bharat / state

ಡಿಸಿಎಂ ಹುದ್ದೆ ಸೃಷ್ಟಿಸುವುದು ಕಾನೂನು ಬಾಹಿರ: ಸರ್ಕಾರಕ್ಕೆ ಪತ್ರ ಬರೆದ ಸಾಮಾಜಿಕ‌ ಕಾರ್ಯಕರ್ತ

ಪ್ರಮುಖ ಸಮುದಾಯಗಳಿಗೆ ಒಂದೊಂದು ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಕಾನೂನು ಹೋರಾಟ ನಡೆಸಲು ಭೀಮಪ್ಪ ಗಡಾದ್​ ಸಜ್ಜಾಗಿದ್ದಾರೆ.

Creation of post of DCM is illegal
ಭೀಮಪ್ಪ ಗಡಾದ

By

Published : May 16, 2023, 5:07 PM IST

ಸಾಮಾಜಿಕ‌ ಕಾರ್ಯಕರ್ತ ಭೀಮಪ್ಪ ಗಡಾದ್ ಮಾತನಾಡಿದರು.

ಬೆಳಗಾವಿ:''ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿರದ ಉಪಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.‌ ಒಂದು ವೇಳೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದರೆ, ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು'' ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್​ ಹೇಳಿದ್ದಾರೆ.

ಸದ್ಯ 135 ಸೀಟ್ ಗೆದ್ದು ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲು ಸಿದ್ಧತೆ ನಡೆಸಿದೆ. ಈ ನಡುವೆ ನಾಲ್ಕರಿಂದ ಐದು ಡಿಸಿಎಂ ಸ್ಥಾನ ಸೃಷ್ಟಿಸುವ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ಡಿಸಿಎಂ‌ ಹುದ್ದೆ ಸೃಷ್ಟಿಸದಂತೆ ಭೀಮಪ್ಪ ಗಡಾದ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಭೀಮಪ್ಪ ಗಡಾದ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರು.

ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ:''ಉಪ ಮುಖ್ಯಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶವಿಲ್ಲದೇ ಇದ್ದರೂ ಸಹಿತ, ಪ್ರತಿಯೊಂದು ಸರ್ಕಾರಗಳಲ್ಲಿ ನೇಮಕ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಕಾನೂನಿನಲ್ಲಿ ಅವಕಾಶವಿರುವುದೇ? ಎಂದು ವಿಧಾನಸೌಧದಲ್ಲಿರುವ ಅಧಿಕಾರಿಗಳನ್ನು ಮಾಹಿತಿ ಹಕ್ಕು ಕಾನೂನಿನ ಪ್ರಕಾರ ಕೇಳಿದಾಗ ಒಬ್ಬರ ಕಡೆ ಒಬ್ಬರೂ ಬೆರಳು ಮಾಡಿ ತೋರಿಸುತ್ತ ಹಾರಿಕೆ ಉತ್ತರ ನೀಡುತ್ತಿದ್ದರು. ಆದರೆ, ಸುಮಾರು 12 ವರ್ಷಗಳ ಕಾಲ ಸತತ ಹೋರಾಟದ ಫಲವಾಗಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯು 2021ರ ಫೆಬ್ರವರಿ 4ರಂದು ಈ ಕುರಿತು ಅಧಿಕೃತವಾಗಿ ಲಿಖಿತ ಮಾಹಿತಿ ನೀಡಿದೆ.

ಅಧಿಕಾರಿಗಳ ವಿರುದ್ಧ ಗಡಾದ ಅಸಮಾಧಾನ:''ಸಂವಿಧಾನದ ಅನುಚ್ಛೇಧ 163-164ರಲ್ಲಿ ಎಲ್ಲಿಯೂ ಉಪ-ಮುಖ್ಯಮಂತ್ರಿಗಳ ನೇಮಕಾತಿಯ ಬಗ್ಗೆ ಪ್ರಸ್ತಾಪ ಇರುವುದಿಲ್ಲ. ಅದಾಗಿಯೂ ಸಹ ಹಿಂದಿನಿಂದ ಉಪ-ಮುಖ್ಯಮಂತ್ರಿಗಳ ನೇಮಕಾತಿಯ ಸಂಪ್ರದಾಯ ನಡೆದು ಬಂದಿರುವುದು'' ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ರಾಜ್ಯ ಶಿಷ್ಟಾಚಾರ) ಇಲಾಖೆಯ ಅಧಿಕಾರಿಗಳು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಕಾರಣ ಈಗ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವಿರದ ಉಪ-ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶ ನೀಡಬಾರದು'' ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತಗಳು ನಮ್ಮ ದೇಶದ ಸಂವಿಧಾನದ ಪ್ರಕಾರ ಮತ್ತು ಅದರ ಅಡಿಯಲ್ಲಿ ರಚಿತವಾಗಿರುವ ಕಾನೂನು ಹಾಗೂ ನಿಯಮಾವಳಿಗಳ ಪ್ರಕಾರ ನಡೆಯುತ್ತಿರುತ್ತವೆ. ಹೊರತಾಗಿ ಸಂಪ್ರದಾಯ ಮತ್ತು ಪರಂಪರೆಗಳ ಮೇಲಿಂದ ಆಡಳಿತ ನಡೆಯುವುದಿಲ್ಲ ಎಂಬುದು ವಿಧಾನಸೌಧದಲ್ಲಿರುವ ಅಧಿಕಾರಿಗಳಿಗೆ ಗೊತ್ತಿರುವಂತೆ ಕಾಣುವುದಿಲ್ಲವೇ ಎಂದು ಭೀಮಪ್ಪ ಗಡಾದ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಭೀಮಪ್ಪ ಗಡಾದ್​:ಒಂದು ವೇಳೆ ಉಪ-ಮುಖ್ಯಮಂತ್ರಿಗಳು ಇಲ್ಲದೇ ಸರ್ಕಾರದ ಆಡಳಿತ ನಡೆಸಲು ತೊಂದರೆಯಾಗುತ್ತಿದೆ ಎಂಬುದು ಸರ್ಕಾರಕ್ಕೆ, ಅಧಿಕಾರಿಗಳಿಗೆ ಮನವರಿಕೆಯಾಗಿದ್ದಲ್ಲಿ, ಉಪ ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಮುಖ್ಯಮಂತ್ರಿಗಳ ವಿವೇಚನಾ ಅನುಸಾರವಾಗಿ ಉಪಮುಖ್ಯಮಂತ್ರಿ ಮತ್ತು ಮಂತ್ರಿಗಳನ್ನು ನೇಮಕ ಮಾಡಲು ಅವಕಾಶವಿರುವಂತೆ ಸಂವಿಧಾನಕ್ಕೆ ತಿದ್ದುಪಡಿ ತಂದು ಕಾನೂನು ರಚಿಸಬೇಕು. ಇಲ್ಲದೇ ಹೋದಲ್ಲಿ ಇದು ಸಂವಿಧಾನದ ಆಶಯಗಳಿಗೆ ವಿರೋಧವಾಗುತ್ತದೆ. ಆದ್ದರಿಂದ ಈಗ ರಚನೆಯಾಗುವ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಂಡು ಕಾನೂನಿನ ಘನತೆ ಗೌರವಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಒಂದು ವೇಳೆ ಒತ್ತಡಕ್ಕೆ ಸಿಲುಕಿ ಅವಕಾಶ ನೀಡಿದ್ದೇ ಆದಲ್ಲಿ ಸಂವಿಧಾನ ವಿರೋಧಿ ಸರ್ಕಾರ, ಅಧಿಕಾರಿಗಳನ್ನು ಹೊಣೆಗಾರನ್ನಾಗಿ ಮಾಡಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುತ್ತದೆ ಎಂದು ಸರ್ಕಾರಕ್ಕೆ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಸಮುದಾಯಗಳಿಗೆ ಒಂದೊಂದು ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಬಗ್ಗೆ ಕಾನೂನು ಹೋರಾಟ ನಡೆಸಲು ಭೀಮಪ್ಪ ಗಡಾದ್​ ಸಜ್ಜಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:25 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಗೆಲುವಿನ ನಗೆಬೀರಿದ ಕಾಂಗ್ರೆಸ್

ABOUT THE AUTHOR

...view details