ಬೆಳಗಾವಿ:ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 45,29,250 ರೂ.ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಕುರಿತು 36,352 ಪ್ರಕರಣಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ 240 ಪ್ರಕರಣಗಳು ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ, 2020 ಅಡಿಯಲ್ಲಿ 117 ಪ್ರಕರಣಗಳನ್ನು ದಾಖಲಿಸಲಾಗಿದೆ. ಆಕ್ಸಿಜನ್ ಹಾಗೂ ರೆಮ್ಡಿಸಿವರ್ ಕುರಿತು ಒಂದು ಪ್ರಕರಣ ಹಾಗೂ ಇದುವರೆಗೆ 7,306 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಮರ್ಪಕ ಆಕ್ಸಿಜನ್ ಲಭ್ಯತೆ:
ಸಮರ್ಪಕವಾಗಿ ಅವಶ್ಯಕತೆಗನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 24 ಕೆ.ಎಲ್. ಆಕ್ಸಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆಯಾಗಿ ಕ್ರಮಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅಲ್ಲದೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡಿಸಿವರ್ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.